ನವದೆಹಲಿ: ಇಂದು ದೇಶದಲ್ಲಿ ಪ್ರತಿ ವರ್ಷದಂತೆ ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ.
ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದರು.ಅವರು ಜುಲೈ 1979 ರಲ್ಲಿ ಪ್ರಧಾನಿಯಾಗಿ ಹುದ್ದೆ ವಹಿಸಿ, 1980ರ ಜನವರಿಯವರೆಗೆ ಇದ್ದರು. ಈ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕಾಗಿ ಅವರ ನೆನಪಿಗಾಗಿ ಈ ದಿನವನ್ನು ಆಚರಿಸುತ್ತಾರೆ. ಅವರು ಮೀರತ್ ನ ನೂರ್ಪುರ್ ನಲ್ಲಿ ಡಿಸೆಂಬರ್ 23 , 1902ರಲ್ಲಿ ಜನಿಸಿದರು.ಅವರು ಕೃಷಿ ಆರ್ಥಿಕತೆಯ ಮಹತ್ವವನ್ನು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು. ಅವರು ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ವಿರೋಧಿಸಿ ಅದ್ವೀತಿಯ ನಾಯಕ ಎನಿಸಿಕೊಂಡಿದ್ದರು. 1959 ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಚೌಧರಿಯವರು ನೆಹರೂರವರನ್ನು ಸಾರ್ವಜನಿಕವಾಗಿಯೇ ಅವರ ಸಾಮೂಹಿಕ ಹಾಗೂ ಸಾಮಾಜಿಕ ನೀತಿಗಳನ್ನು ವಿರೋಧಿಸಿದರು. ಚೌಧರಿ ಸ್ಮಾರಕವನ್ನು ಕಿಸಾನ್ ಘಾಟ್ ಎಂದು ಕರೆಯಲಾಗುತ್ತದೆ. ಹಾಗೆಯೇ ಲಕ್ನೊದ ಅಮೌಸಿ ವಿಮಾನ ನಿಲ್ದಾಣವನ್ನು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಮೀರತ್ ವಿಶ್ವವಿದ್ಯಾಲಯವನ್ನು ಸಹ ಚೌಧರಿ ಸಿಂಗ್ ವಿ.ವಿ ಎಂದು ಮರುನಾಮಕರಣ ಮಾಡಲಾಗುತ್ತದೆ. ಹಾಗೆ ಸರಳ ಜೀವನದಲ್ಲಿ ನಂಬಿಕೆಯಿಟ್ಟಿದ್ದ ಅವರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೊಡುಗೆಗಳನ್ನು ಗುರುತಿಸಿ, ಭಾರತ ಸರ್ಕಾರ ಹಲವು ಬಾರಿ ಸನ್ಮಾನಿಸಿತ್ತು.