Tuesday, January 21, 2025
ಸುದ್ದಿ

ಮಂಗಳೂರು : ​ಬಾಲಕನಿದ್ದ ಕಾರನ್ನು ಟೋಯಿಂಗ್ ಮಾಡಿ ಎಳೆದೊಯ್ದ ಪೊಲೀಸ್ ; ಆರೋಪ – ಕಹಳೆ ನ್ಯೂಸ್

ಮಂಗಳೂರು : ನಗರದ ಮಲ್ಲಿಕಟ್ಟೆಯಲ್ಲಿ ಬಾಲಕನಿದ್ದ ಕಾರನ್ನು ಟೋಯಿಂಗ್ ಮಾಡಿಕೊಂಡು ಎಳೆದೊಯ್ದ ಆರೋಪ ಮಂಗಳೂರು ಪೂರ್ವ (ಕದ್ರಿ) ಸಂಚಾರ ಪೊಲೀಸರ ವಿರುದ್ಧ ಕೇಳಿ ಬಂದಿದೆ.

ಉಜಿರೆಯಿಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಶಾಪಿಂಗ್‌ಗೆಂದು ಮಂಗಳೂರು ನಗರಕ್ಕೆ ಗುರುವಾರ ಸಂಜೆ ಆಗಮಿಸಿದ್ದರು. ಮಲ್ಲಿಕಟ್ಟೆಯ ಮಳಿಗೆಯೊಂದರ ಮುಂದೆ ಕಾರು ಬಂದು ನಿಂತಿತು. ಮಹಿಳೆಯು ಓರ್ವ ಪುತ್ರನೊಂದಿಗೆ ಶಾಪಿಂಗ್‌ನಲ್ಲಿ ತಲ್ಲೀನರಾಗಿದ್ದರು. ಕಾರು ಚಾಲಕ ಹಾಗೂ 4ನೇ ತರಗತಿಯ ಬಾಲಕ ಕಾರಲ್ಲೇ ಉಳಿದುಕೊಂಡಿದ್ದರು. ಈ ಮಧ್ಯೆ, ಮಹಿಳೆ ಮೊಬೈಲ್‌ನ್ನು ಕಾರಿನಲ್ಲೇ ಬಿಟ್ಟು ತೆರಳಿದ್ದನ್ನು ಗಮನಿಸಿದ ಚಾಲಕನು, ಮೊಬೈಲ್ ಕೊಡಲೆಂದು ಮಳಿಗೆಯ ಒಳಪ್ರವೇಶಿಸಿದ್ದಾನೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ, ರಸ್ತೆಯಲ್ಲಿ ಕಾರನ್ನು ಪಾರ್ಕ್ ಮಾಡಿದ್ದ ಆರೋಪದಲ್ಲಿ ಮಂಗಳೂರು ಕದ್ರಿ ಸಂಚಾರ ಪೊಲೀಸರು, ಕಾರನ್ನು ಟೋಯಿಂಗ್ ಮಾಡಿಕೊಂಡು ಹೋಗಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಕಾರು ಚಾಲಕನು ಹೊರಬಂದಾಗ ಕಾರು ಕಾಣೆಯಾಗಿತ್ತು. ಸಮೀಪದಲ್ಲಿ ವಿಚಾರಿಸಿದಾಗ ಕಾರನ್ನು ಟೋಯಿಂಗ್ ವಾಹನ ಎಳೆದೊಯ್ದಿದೆ ಎನ್ನುವುದು ತಿಳಿದುಬಂದಿದೆ. ಕಾರನ್ನು ಎಳೆದೊಯ್ದ ಘಟನೆಯಲ್ಲಿ ಬಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಲ್ಲಿ ಬಾಲಕ ನಿದ್ದೆ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಟಿಂಟ್ ಗ್ಲಾಸ್ ಹಾಕಲಾಗಿತ್ತು’

ಕಾರನ್ನು ರಸ್ತೆಯಲ್ಲೇ ಪಾರ್ಕ್ ಮಾಡಿದ್ದರಿಂದ ಟೋಯಿಂಗ್ ಮಾಡಲಾಗಿದೆ. ಇದಕ್ಕೂ ಮೊದಲು ತಮ್ಮ ಸಿಬ್ಬಂದಿ ಕಾರು ನಿಂತ ಸ್ಥಳ, ಕಾರಿನ ದೃಶ್ಯ ಸೆರೆ ಹಿಡಿದಿದ್ದಾರೆ. ಕಾರಿಗೆ ಟಿಂಟ್ ಗ್ಲಾಸ್ ಹಾಕಿದ್ದರಿಂದ ಒಳಗಿರುವವರು ಕಂಡುಬಂದಿಲ್ಲ. ಎಲ್ಲವನ್ನು ಪರಿಶೀಲಿಸಿಯೇ ಕಾರನ್ನು ಟೊಯಿಂಗ್ ಮಾಡಲಾಗಿದೆ ಎಂದು ಕದ್ರಿ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.