ವಿಟ್ಲ: ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ೨೦೧೯-೨೦ನೇ ವರ್ಷದಲ್ಲಿ ೧.೯೪ ಕೋಟಿ ವ್ಯವಹಾರ ನಡೆಸಿದೆ.
ನೂತನ ಕಟ್ಟಡ ಕಾಮಗಾರಿ ಅಗತ್ಯವಿರುವ ಪರವಾನಿಗೆ ಲಭಿಸಿದ್ದು, ೮೭ ಲಕ್ಷ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್ ಹೇಳಿದರು. ಅವರು ಬುಧವಾರ ಅಳಿಕೆ ಶ್ರೀಸತ್ಯಸಾಯಿ ಲೋಕ ಸೇವಾ ಪ್ರಾರ್ಥನಾ ಮಂದಿರದಲ್ಲಿ ನಡೆದ ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಳಿಕೆ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಹಾಲಿನ ಹಣವನ್ನು ಸಂಘದ ಮೂಲಕ ವಿತರಣೆಮಾಡಲಾಗುತ್ತಿದೆ. ಮತ್ತು ಠೇವಣಿ ಸಂಗ್ರಹ, ಸಾಲ ನೀಡಿಕೆಗೆ ಹಾಕಿರುವ ಗುರಿಯ ಜತೆಗೆ ಮುಂದಿನ ವರ್ಷದಲ್ಲಿ ಶೇ.೧೦೦ ಸಾಲಾ ವಸೂಲಾತಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು. ಹಾಗೆಯೇ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ ನಮನ್ ಶೆಟ್ಟಿ, ಮೇಘಾ ಕೆ. ಶಭರೀಶ, ಗಣೇಶ ಪಿ., ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಉಮೇಶ ನಾಯಕ್ ವರದಿ ಮಂಡಿಸಿದ್ದು, ನಿರ್ದೇಶಕರಾದ ಎಂ. ಚಂದ್ರನಾಥ ಆಳ್ವ, ಜಿ. ರೂಪೇಶ ರೈ, ಬಿ. ತಿಮ್ಮಪ್ಪ ಶೆಟ್ಟಿ, ಎ. ವಸಂತ, ಬಾಸ್ಕರ ಎಂ., ಸೀತಾರಾಮ ಶೆಟ್ಟಿ, ಆನಂದ ಶೆಟ್ಟಿ, ಸುಂದರ ನಾಯ್ಕ, ಚಂದ್ರಾವತಿ, ಮಹೇಶ, ವಿನಯ, ವೇದಾವತಿ ಉಪಸ್ಥಿತರಿದ್ದರು.