Saturday, November 23, 2024
ಸುದ್ದಿ

ಮಂಗಳೂರು : ಮಹಿಳೆಯಿಂದ ಸ್ವಾಭಿಮಾನದ ಕೃಷಿ ; ತರಕಾರಿ ಬೆಳೆಯುವ ಮೂಲಕ ಗಮನ ಸೆಳೆದ ಮಹಿಳೆ – ಕಹಳೆ ನ್ಯೂಸ್

ಮಂಗಳೂರು : ಮಹಿಳೆಯರು ಕೇವಲ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಮಾತ್ರ ಸೀಮಿತ ಎನ್ನುವ ಕಾಲ ಕಳೆದು ಹೋಗಿದೆ. ಇಂದು ಮಹಿಳೆಯೂ ಪುರುಷನಷ್ಟೇ ಸಮಾನಳು ಎನ್ನುವುದನ್ನು ಎಲ್ಲಾ ಕ್ಷೇತ್ರಗಳಲ್ಲೂ ತೋರಿಸಿಕೊಟ್ಟಿದ್ದಾಳೆ. ಇಂಥ ಸ್ವಾಭಿಮಾನಿ ಮಹಿಳೆಯರು ಇದೀಗ ಕೃಷಿ ಕ್ಷೇತ್ರದಲ್ಲೂ ತನ್ನ ಕೈಯಾಡಿಸಲು ತೊಡಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಮಹಿಳೆಯೋರ್ವರು ಬರಪೂರ ತರಕಾರಿ ಬೆಳೆಯುವ ಮೂಲಕ ಸುದ್ಧಿಯಲ್ಲಿದ್ದಾರೆ. ತನ್ನ ಮನೆಯಂಗಳವನ್ನೇ ತರಕಾರಿ ತೋಟವನ್ನಾಗಿ ಮಾಡಿಕೊಂಡಿರುವ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಗಾರು ಸಮೀಪದ ದೇವಸ್ಯ ಎನ್ನುವ ಗ್ರಾಮದ ಮಹಿಳೆ ರಾಜೇಶ್ವರಿ ಅವರದು ಮೂಲತ ಕೃಷಿ ಕುಟುಂಬ. ಗಂಡ ರಾಮಚಂದ್ರ ಭಟ್ ಪಶುವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಬಳಿಕ ತನ್ನ ವೃತ್ತಿ ತ್ಯಜಿಸಿ ಸಂಪೂರ್ಣ ಕೃಷಿಯಲ್ಲೇ ತೊಡಗಿಕೊಂಡವರು. ರಾಮಚಂದ್ರ ಭಟ್ ರಿಗೆ ದೇವಸ್ಯ ಆಸುಪಾಸಿನಲ್ಲಿ ಎರಡು ಕೃಷಿಭೂಮಿಯಿದ್ದು, ಇದರಲ್ಲಿ ಒಂದನ್ನು ತನ್ನ ಹೆಂಡತಿ ರಾಜೇಶ್ವರಿ ಅವರ ಉಸ್ತುವಾರಿಗೆ ನೀಡಿದ್ದಾರೆ.

ಕೃಷಿಯಲ್ಲಿ ಹೊಸತನವನ್ನು ತರಬೇಕು ಎನ್ನುವ ಕಾರಣಕ್ಕಾಗಿಯೇ ಕೃಷಿ ವೃತ್ತಿಗೆ ಇಳಿದ ರಾಜೇಶ್ವರಿ ಅವರು ಇದೀಗ ಒರ್ವ ಪ್ರಗತಿಪರ ಕೃಷಿಕೆಯಾಗಿ ಬದಲಾಗಿದ್ದಾರೆ. ಸುಮಾರು ಎಳೆಂಟು ಎಕರೆ ಇರುವ ತನ್ನ ಕೃಷಿಭೂಮಿಯಲ್ಲಿ ಅಡಿಕೆ, ತೆಂಗು, ಕಾಳು ಮೆಣಸು, ಕೊಕ್ಕೋ ಹೀಗೆ ವಿವಿಧ ರೀತಿಯ ಕೃಷಿಯನ್ನು ಬೆಳೆಯುತ್ತಿದ್ದಾರೆ. ಆದರೆ, ಈ ಎಲ್ಲಾ ಕೃಷಿಗಳ ನಡುವೆ ರಾಜೇಶ್ವರಿಯವರಿಗೆ ಹೆಚ್ಚಿನ ಉತ್ಸಾಹ ತರಕಾರಿ ಬೆಳೆಯುವುದರಲ್ಲಾಗಿದೆ. ಈ ಕಾರಣಕ್ಕಾಗಿಯೇ ತನ್ನ ಮನೆಯ ಅಂಗಳವನ್ನೇ ತರಕಾರಿ ತೋಟವನ್ನಾಗಿ ಪರಿವರ್ತಿಸಿರುವ ಇವರು ಅಂಗಳ ತುಂಬಾ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲಾರಂಭಿಸಿದ್ದಾರೆ. ಬೆಂಡೆಕಾಯಿ, ಸೌತೆಕಾಯಿ, ಅಲಸಂಡೆ, ಆಗಲಕಾರಿ, ಪಡುವಲಕಾಯಿ, ಹೀರೆಕಾಯಿ, ಮೆಣಸು, ಬಸಳೆ, ಮುಳ್ಳುಸೌತೆ, ಕುಂಬಳಕಾಯಿ ಹೀಗೆ ಎಲ್ಲವೂ ಇವರ ಅಂಗಳದ ತೋಟದಲ್ಲಿದೆ. ಗಂಡ ರಾಮಚಂದ್ರ ಭಟ್ ತನ್ನ ಇನ್ನೊಂದು ತೋಟದ ಮೇಲೆ ಗಮನಹರಿಸಬೇಕಾದ ಕಾರಣ, ಮನೆ ಪ್ರದೇಶದಲ್ಲಿರುವ ತೋಟಕ್ಕೆ ಈಗ ರಾಜೇಶ್ವರಿಯವರೇ ಯಜಮಾನಿ. ದಿನವೊಂದಕ್ಕೆ ಒಂದೊಂದು ಬೆಳೆಯಿಂದ 5 ಕಿಲೋಗೂ ಮಿಕ್ಕಿದ ತರಕಾರಿಯನ್ನು ಪಡೆಯುತ್ತಿರುವ ಇವರು ಈ ತರಕಾರಿಗಳನ್ನು ಹೆಚ್ಚಾಗಿ ಮನೆ ಉಪಯೋಗಕ್ಕೇ ಬಳಸಿಕೊಳ್ಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ತೋಟಗಳಲ್ಲಿ ದುಡಿಯುತ್ತಿರುವ 40 ಕ್ಕೂ ಮಿಕ್ಕಿದ ಕಾರ್ಮಿಕರಿಗೆ ಪ್ರತಿದಿನವೂ ಇದೇ ತೋಟದಲ್ಲಿ ಬೆಳೆದ ತರಕಾರಿಗಳ ಪದಾರ್ಥವನ್ನು ಬಡಿಸಲಾಗುತ್ತದೆ. ಅಲ್ಲದೆ ಮಿಕ್ಕುಳಿದ ತರಕಾರಿಗಳನ್ನು ಮಾರಾಟವೂ ಮಾಡಲಾಗುತ್ತದೆ. ಅದರಲ್ಲೂ ಸೌತೆಕಾಯಿ ಬಳ್ಳಿಯಲ್ಲಿ ಮೊದಲ ಕಟಾವಿಗೇ 60 ಕಿಲೋದಷ್ಟು ಪಡೆದಿದ್ದಾರೆ.
ಸಂಪೂರ್ಣ ಸಾವಯವ ಗೊಬ್ಬರವನ್ನು ತನ್ನ ತರಕಾರಿ ತೋಟಗಳಿಗೆ ಬಳಸುತ್ತಿರುವ ರಾಜೇಶ್ವರಿಯವರ ಗೊಬ್ಬರ ತಯಾರಿಸುವ ವಿಧಾನವೂ ಕೊಂಚ ದಿಫರೆಂಟ್. ಮಳೆಗಾಲ ಹಾಗೂ ಬೇಸಿಗೆಕಾಲದಲ್ಲಿ ನಿರಂತರವಾಗಿ ತರಕಾರಿ ಬೆಳೆ ಬೆಳೆಯುತ್ತಿರುವ ಇವರು ಈ ಗಿಡಗಳಿಗಾಗಿ ಗೊಬ್ಬರವನ್ನೂ ತಾವೇ ತಯಾರು ಮಾಡಿ ಹಾಕುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಟ್ಟಿ ಗೊಬ್ಬರ, ನೆಲಕಡಲೆ ಹಿಂಡಿ, ಸ್ಲರಿ ಜೊತೆಗೆ ಅಮೃತ ಸಂಜೀವಿನಿ ಎನ್ನುವ ಗೊಬ್ಬರನ್ನೂ ಇವರು ತರಕಾರಿ ಗಿಡಗಳಿಗೆ ಸಿಂಪಡಿಸುತ್ತಾರೆ. ಎರಡು ಸೇರು ನೆಲಕಡಲೆ ಹಿಂಡಿ, ಐದು ಬಿಂದಿಗೆ ಸ್ಲರಿ ನೀರು, ಎರಡು ಕಿಲೋದಷ್ಟು ಬೆಲ್ಲ, ಒಂದು ಹಿಡಿ ಮಣ್ಣು ಹಾಕಿ ಕಲಸಿದ ಮೇಲೆ 48 ಗಂಟೆಗಳ ಕಾಲ ಹಾಗೆಯೇ ಬಿಟ್ಟು ಬಳಿಕ ಈ ನೀರನ್ನು ತರಕಾರಿ ಗಿಡಗಳ ಬುಡಗಳಿಗೆ ಹಾಕಲಾಗುತ್ತದೆ. ಹತ್ತು ಲೀಟರ್ ನೀರಿಗೆ 1 ಲೀಟರ್ ನಷ್ಟು ಮಜ್ಜಿಗೆ ಮಿಕ್ಸ್ ಮಾಡಿದ ದ್ರಾವಣವನ್ನೂ ತರಕಾರಿ ಗಿಡಗಳಿಗೆ ಹಾಕುತ್ತಾರೆ. ಇದರಿಂದ ಗಿಡಗಳ ಸಮೃದ್ಧವಾಗಿ ಬೆಳೆದು ಉತ್ತಮ ಫಲವನ್ನು ನೀಡುತ್ತದೆ. ಗಿಡಗಳಿಗೆ ಕಾಡುವ ಕೀಟಬಾಧೆಗೆ ಗೋಮೂತ್ರವನ್ನು ಗಿಡಗಳಿಗೆ ಸಿಂಪಡಿಸುವುದರ ಜೊತೆಗೆ ಗಿಡಗಳ ಬುಡಕ್ಕೂ ಹಾಕಲಾಗುತ್ತದೆ. ಗೋಮೂತ್ರ ಕೀಟನಾಶಕವಾಗಿ ಹಾಗೂ ಯೂರಿಯಾ ರೂಪದಲ್ಲೂ ಕೆಲಸ ಮಾಡುತ್ತದೆ ಎನ್ನುವುದು ರಾಜೇಶ್ವರಿಯವರ ಅಭಿಪ್ರಾಯ.
ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ, ಕೃಷಿ ಚಟುವಟಿಕೆಯಲ್ಲಿ ಏನಿದ್ದರೂ ಪುರುಷರು ಮಾತ್ರ ಕರಗತ ಎನ್ನುವ ಮಾತನ್ನು ರಾಜೇಶ್ವರಿಯವರು ಸುಳ್ಳು ಮಾಡಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ರಾಜೇಶ್ವರಿ ಒರ್ವ ರೋಲ್ ಮಾಡಲ್ ಕೂಡಾ ಆಗಿದ್ದಾರೆ.