ಬೆಳ್ಳಂಬೆಳಗ್ಗೆ ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಐದು ಕಾರುಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಏರ್ಪೋರ್ಟ್ ರಸ್ತೆಯಲ್ಲಿ ಬಂದ ಸ್ವಿಫ್ಟ್ ಕಾರು ಡಿವೈಡರ್ ಹಾರಿ ಏರ್ಪೋರ್ಟ್ ಕಡೆ ಹೊರಟಿದ್ದ ನಿಸಾನ್ ಕಾರಿಗೆ ಡಿಕ್ಕಿ ಹೊಡೆದಿದೆ. ಜೊತೆಗೆ ಇಂಡಿಕಾ ಅಲ್ಟೋ ಸೇರಿ ಮೂರು ಕಾರುಗಳಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ. ಜೊತೆಗೆ ಇಂಡಿಕಾ ಕಾರು ಚಾಲಕನೂ ಸಹ ಗಾಯಗೊಂಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಟ್ರಾಫಿಕ್ ಪೊಲೀಸರು ದೌಡಾಯಿಸಿದ್ದಾರೆ. ಏರ್ಪೋರ್ಟ್ ರಸ್ತೆ ಬ್ಯಾಟರಾಯನಪುರ ಫ್ಲೈಓವರ್ ಮೇಲೆ ಈ ಅಪಘಾತ ನಡೆದಿದೆ. ಹೀಗಾಗಿ ಏರ್ಪೋರ್ಟ್ ಕಡೆ ಹೋಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತದಲ್ಲಿ ಒಟ್ಟು 9 ಜನರಿಗೆ ಗಾಯಗಳಾಗಿವೆ. ಪೊಲೀಸರು ಅಪಘಾತದಲ್ಲಿ ಜಖಂಗೊಂಡ ಕಾರುಗಳ ತೆರವು ಮಾಡಿ, ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಟ್ಟರು. ಐದು ಕಾರುಗಳಲ್ಲಿದ್ದ 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸರಣಿ ಅಪಘಾತಕ್ಕೆ ಬೈಕ್ ಸವಾರರ ಜಾಲಿ ರೈಡ್ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಂದು ಭಾನುವಾರವಾದ್ದರಿಂದ ಬೈಕ್ ಸವಾರರು ಏರ್ಪೋರ್ಟ್ ರಸ್ತೆಯಲ್ಲಿ ನಂದಿಬೆಟ್ಟದ ಕಡೆಗೆ ಜಾಲಿ ರೈಡ್ ಹೋಗುತ್ತಿದ್ದರು ಎನ್ನಲಾಗಿದೆ. ವೇಗವಾಗಿ ಬರುತ್ತಿದ್ದ ಬೈಕ್ ಸವಾರರು ಸ್ವಿಫ್ಟ್ ಕಾರನ್ನು ಓವರ್ ಟೇಕ್ ಮಾಡಿ ಚಮಕ್ ಕೊಟ್ಟಿದ್ದರು.
ಈ ವೇಳೆ ಗಾಬರಿಯಾದ ಕಾರು ಚಾಲಕ, ಎದುರು ರಸ್ತೆಗೆ ನುಗ್ಗಿದ್ದ ಪರಿಣಾಮ ಕಾರು ಪಲ್ಟಿಯಾಗಿದೆ. ಆಗ ಏರ್ಪೋರ್ಟ್ ಕಡೆಯಿಂದ ಬರುತ್ತಿದ್ದ ನಿಸಾನ್ ಹಾಗೂ ಸ್ವಿಫ್ಟ್ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಐದು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಮೂರು ಕಾರುಗಳು ಪಲ್ಟಿಯಾಗಿವೆ. ಸದ್ಯ ಪೊಲೀಸರು ಕಾರುಗಳನ್ನ ತೆರವುಗೊಳಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.