Friday, September 20, 2024
ಸುದ್ದಿ

ಎಪ್ರಿಲ್‌ ಬಳಿಕ ಅಡಿಕೆ ಧಾರಣೆ ಏರಿಕೆ ಸಂಭವ – ಕ್ಯಾಂಪ್ಕೋ

ಸುಳ್ಯ: ಆರ್ಥಿಕ ವರ್ಷಾಂತ್ಯದಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿದ್ದರೂ ಎಪ್ರಿಲ್‌ ತಿಂಗಳ ಅನಂತರ ಹಳೆ ಮತ್ತು ಹೊಸ ಅಡಿಕೆ ಧಾರಣೆ ಏರಿಕೆ ಕಾಣಲಿದೆ ಎಂದು ಮಾರುಕಟ್ಟೆ ಮೂಲ ಗಳು ಖಚಿತಪಡಿಸಿವೆ. ಹೀಗಾಗಿ ಮಾರುಕಟ್ಟೆಯ ಧಾರಣೆ ಇಳಿಕೆ ತಂತ್ರಗಾರಿಕೆಗೆ ಬೆಳೆಗಾರರು ಪ್ರತಿತಂತ್ರ ರೂಪಿಸಿದ್ದು, ಇತಿ-ಮಿತಿಯಲ್ಲಷ್ಟೇ ಅಡಿಕೆಯನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ.

ಹೊಸ ವರ್ಷದ ಆರಂಭದಲ್ಲಿ ಹೊಸ ಮತ್ತು ಹಳೆ ಅಡಿಕೆ ಧಾರಣೆಯಲ್ಲಿ ಕೊಂಚ ಪ್ರಗತಿ ಕಂಡು, ಧಾರಣೆ ಮತ್ತಷ್ಟು ಏರುವ ನಿರೀಕ್ಷೆ ಮೂಡಿಸಿತ್ತು. ಮಾರ್ಚ್‌ನಲ್ಲಿ ಧಾರಣೆ ಹಿಮ್ಮುಖವಾಗಿ ಚಲಿಸಿ, ಬೆಳೆಗಾರರಿಗೆ ನಿರಾಶೆ ಮೂಡಿಸಿತ್ತು. ಆದರೆ ಕಳೆದ ಕೆಲ ವರ್ಷಗಳ ಅಂಕಿ-ಅಂಶವನ್ನು ಗಮನಿಸಿದರೆ, ಮಾರ್ಚ್‌ನಲ್ಲಿ ಧಾರಣೆ ಇಳಿಕೆಯಾಗುತ್ತಿರುವ ಅಂಶ ದಾಖಲಾಗಿದೆ. ಈ ಕುಸಿತ ಬೇಡಿಕೆ ಇಲ್ಲದೇ ಇರುವುದರ ಪರಿಣಾಮ ಅಲ್ಲ. ಬದಲಿಗೆ ಮಾರುಕಟ್ಟೆ ಲಾಭದ ತಂತ್ರಗಾರಿಕೆ ಅಡಗಿದೆ ಅನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಧಾರಣೆ ಏರಿಳಿಕೆ

ಜಾಹೀರಾತು

ನೋಟು ನಿಷೇಧ, ಜಿಎಸ್‌ಟಿ ಜಾರಿ ಅನಂತರ ಮಾರುಕಟ್ಟೆಯಲ್ಲಿ ಉದ್ಭವಿಸಿದ ಅಸ್ಥಿರತೆ ಅಡಿಕೆ ಮಾರುಕಟ್ಟೆಗೂ ತಟ್ಟಿತ್ತು. 2018ರ ಜುಲೈ ಮೊದಲ ವಾರದಲ್ಲಿ ಹಳೆ ಅಡಿಕೆಗೆ 260 ರೂ.ನಷ್ಟು ಇದ್ದ ಧಾರಣೆ ಜುಲೈ ಮೂರನೇ ವಾರದಲ್ಲಿ ಕೊಂಚ ಏರಿತ್ತು. ಅನಂತರ ಇಳಿಮುಖಗೊಂಡ ಧಾರಣೆ ಡಿಸೆಂಬರ್‌ ಕೊನೆ ವಾರದಲ್ಲಿ ಚೇತರಿಕೆ ಕಂಡಿತ್ತು. ಜನವರಿ ಯಲ್ಲಿ ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 218ಕ್ಕೆ, ಹೊರ ಮಾರುಕಟ್ಟೆಯಲ್ಲಿ 220 ರೂ, ಸಿಂಗಲ್‌ ಚೋಲ್‌ಗೆ 260 ರೂ, ಹೊರ ಮಾರುಕಟ್ಟೆಯಲ್ಲಿ 262-265 ರೂ., ಡಬ್ಬಲ್‌ ಚೋಲ್‌ಗೆ 270 ರೂ., ಹೊರ ಮಾರುಕಟ್ಟೆಯಲ್ಲಿ 272ರಿಂದ 275 ರೂ. ತನಕ ಖರೀದಿ ಆಗಿತ್ತು.

ಇದಾದ ಅನಂತರ ಮತ್ತೆ ಕುಸಿತದತ್ತ ಮುಖ ಮಾಡಿದೆ. ಮಾರ್ಚ್‌ 28ರಂದು ಹೊಸ ಅಡಿಕೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 220 ರೂ., ಹಳೆ ಅಡಿಕೆಗೆ 260 ರೂ. ಇತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 208ರಿಂದ 210ರ ತನಕ ಖರೀದಿಯಾಗಿದೆ. ಹಳೆ ಅಡಿಕೆಗೆ 250 ರೂ. ತನಕವೂ ಬೇಡಿಕೆ ಇತ್ತು. ಹೊರ ಮಾರುಕಟ್ಟೆ ಧಾರಣೆಗೆ ಹೋಲಿಸಿದರೆ, ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ ಹಂತದಲ್ಲಿತ್ತು.

ಮಾರುಕಟ್ಟೆ  ತಂತ್ರಗಾರಿಕೆ

ಪ್ರತಿ ವರ್ಷವೂ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಅಡಿಕೆ ಧಾರಣೆ ಇಳಿಸುವ ತಂತ್ರಗಾರಿಕೆ ಮಾರು ಕಟ್ಟೆ ಯಲ್ಲಿ ನಡೆಯುತ್ತದೆ. ಅದಕ್ಕೆ ಮುಖ್ಯ ಕಾರಣ ಮಾರ್ಚ್‌ ನಲ್ಲಿ ಬ್ಯಾಂಕ್‌ ಸಾಲ ಪಾವತಿಸಬೇಕಿದ್ದು, ಹೆಚ್ಚಿನ ಬೆಳೆಗಾರರು ಅಡಿಕೆ ಮಾರಾಟ ಮಾಡಲು ಮುಂದಾಗುತ್ತಾರೆ. ಇದೇ ಸಂದರ್ಭ ಧಾರಣೆ ಇಳಿಮುಖಗೊಳಿಸಿ, ಬೆಳೆಗಾರರಿಂದ ಕಡಿಮೆ ಧಾರಣೆಗೆ ಅಡಿಕೆ ಖರೀದಿಸಿ ಅನಂತರ ಹೆಚ್ಚು ಬೆಳೆಗೆ ಮಾರಾಟ ಮಾಡಿ ಲಾಭ ಗಳಿಸುವ ತಂತ್ರಗಾರಿಕೆ ಮಾರುಕಟ್ಟೆಯಲ್ಲಿ ನಡೆಯುತ್ತದೆ.

ಬೆಳೆಗಾರರ ಪ್ರತಿತಂತ್ರ

ಈ ಬಾರಿ ಕೃಷಿಕರು ಅದನ್ನು ಎದುರಿಸಲು ಸಿದ್ಧತೆ ನಡೆಸಿದ್ದರು. ಅಗತ್ಯ ಪ್ರಮಾಣದ ಅಡಿಕೆಯನ್ನು ಮಾತ್ರ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಹಾಗಾಗಿ ಕಳೆದ ಬಾರಿಗೆ ಹೋಲಿಸಿದರೆ ಸುಳ್ಯ, ಪುತ್ತೂರು ಭಾಗ ದಲ್ಲಿ ಉತ್ಪಾದಕರು ಫೆಬ್ರವರಿ, ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬಂದ ಅಡಿಕೆ ಪ್ರಮಾಣದಲ್ಲಿ ಗಣನೀಯ ಇಳಿಮುಖವಾಗಿದೆ. ಧಾರಣೆ ಏರಿಕೆ ಅನಂತರವೇ ಮಾರುವ ಪ್ರತಿ ತಂತ್ರಗಾರಿಕೆ ರೂಪಿಸಿದ್ದಾರೆ. ಇದರಿಂದ ಧಾರಣೆ ಸಹಜವಾಗಿ ಏರುವ ಸಾಧ್ಯತೆ ಕಂಡು ಬಂದಿದೆ.

ದುಬಾರಿ ನಿರ್ವಹಣೆ ವೆಚ್ಚ

ಪ್ರತಿ ಬಾರಿಯು ಅಡಿಕೆ ಬೆಳೆಗಾರನಿಗೆ ದುಬಾರಿ ನಿರ್ವಹಣಾ ವೆಚ್ಚ  ಸವಲಾಗಿ ಪರಿಣಮಿಸಿದೆ. ವರ್ಷದಿಂದ ವರ್ಷಕ್ಕೆ ಬೆಳಗಾರನ ಉತ್ಪಾದನಾ ವೆಚ್ಚ ಮತ್ತು ನಿರ್ವಹಣೆ ವೆಚ್ಚದ ಮಧ್ಯೆ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದ್ದು, ಬೆಳೆಗಾರರ ಪಾಲಿಗೆ ಹೊರೆ ಎನಿಸಿದೆ. ಹಾಲಿ ವರ್ಷದಲ್ಲಿ ಮದ್ದು ಸಿಂಪಡಣೆ ಕೂಲಿ 1,200 ರೂ. ದಾಟಿದೆ. ಐದು ವರ್ಷದ ಹಿಂದೆ ಇದರ ಕೂಲಿ 500 ರೂ. ಇತ್ತು. ರಾಸಾಯನಿಕ ಗೊಬ್ಬರ ಧಾರಣೆ ಈಗ 980ಕ್ಕೆ ಏರಿದೆ. ಐದು ವರ್ಷದ ಹಿಂದೆ 600 ರೂ. ಆಸುಪಾಸಿನಲ್ಲಿತ್ತು. ಆದರೆ ಅಡಿಕೆ ಧಾರಣೆ ಈಗ 215 ರೂ. ಇದೆ. ಐದು ವರ್ಷದ ಹಿಂದೆ 350ಕ್ಕೂ ಹೆಚ್ಚಿತ್ತು. ಇಲ್ಲಿ ಬೆಳೆಗಾರ ವ್ಯಯಿಸುವ ಖರ್ಚು ವರ್ಷಂಪ್ರತಿ ಏರಿಕೆ ಪ್ರಮಾಣದಲ್ಲಿ ಇದ್ದರೆ, ಆತನಿಗೆ ದೊರೆಯುವ ಧಾರಣೆ ಕುಸಿತದತ್ತ ಸಾಗಿದೆ. ಹಾಗಾಗಿ ಸ್ಥಿರ ಧಾರಣೆ ನಿಗದಿಗೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.

ಎಪ್ರಿಲ್‌ನಲ್ಲಿ  ಏರಿಕೆ :

ಎಪ್ರಿಲ್‌ ಮೊದಲ ವಾರದಲ್ಲಿ ಅಡಿಕೆ ಧಾರಣೆ ಏರಿಕೆ ಕಾಣಲಿದೆ. ಮಾರ್ಚ್‌ ತಿಂಗಳಲ್ಲಿ  ಕುಸಿತ ಕಂಡರೂ ಮುಂದೆ ಧಾರಣೆ ಹೆಚ್ಚಳವಾಗಲಿದೆ. ಕ್ಯಾಂಪ್ಕೋ ಸಂಸ್ಥೆ ಗರಿಷ್ಠ ಧಾರಣೆ ನೀಡಿ ಅಡಿಕೆ ಖರೀದಿಸಿ ಬೆಳೆಗಾರರ ಹಿತ ಕಾಪಾಡಲು ಆದ್ಯತೆ ನೀಡಿದೆ.

– ಎಸ್‌.ಆರ್‌. ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೋ