ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಶ್ವೇತಾ ಮತ್ತು ಶ್ರೀನಿವಾಸ್ ದಂಪತಿಗಳ 11 ತಿಂಗಳ ಮಗು ಅನಿಶಾಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.
ತಂದೆ-ತಾಯಿಯ ಜೊತೆ ಮಲಗಿದ್ದ ಕಂದಮ್ಮನನ್ನು ಮನೆಗೆ ನುಗ್ಗಿದ ಕಿರಾತಕರು ಕದ್ದು ಪರಾರಿಯಾಗಿರುವುದು ಈ ದಂಪತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಹೇಗಾದರೂ ಮಾಡಿ ಮಗುವನ್ನು ಹುಡುಕಿಕೊಡಿ ಎಂದು ಕಂಡ ಕಂಡವರ ಬಳಿ ಗೋಗರೆಯುತ್ತಿದ್ದಾರೆ. ಮಗುವಿವಾಗಿ ಹುಡುಕಾಟವೂ ನಡೆಯುತ್ತಿದೆ. 2 ವರ್ಷದ ಹಿಂದೆ ಶ್ವೇತಾ ಮತ್ತು ಶ್ರೀನಿವಾಸ್ ವಿವಾಹವಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಗಳು ಮಗುವನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಮನೆಯಲ್ಲಿ ಬಡತನವಿದ್ದರೂ ಮಗುವಿಗೆ ಕೊಡುವ ಪ್ರೀತಿಯಲ್ಲಿ ಯಾವುದೇ ಬಡತನವಿರಲಿಲ್ಲ. ರಾಣಿಯಂತೆ ಮಗಳನ್ನು ಈ ದಂಪತಿ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಶ್ವೇತಾ ಮತ್ತು ಶ್ರೀನಿವಾಸ್ ದಂಪತಿ ಹೊಸಮನೆಯನ್ನು ಕಟ್ಟಿಸಿದ್ದು, ಆದ್ದರಿಂದ, ಮನೆಯ ಬಾಗಿಲು ಸರಿ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡವರು, ರಾತ್ರಿ ಮನೆಗೆ ನುಗ್ಗಿ ಮಗುವನ್ನು ಕಳ್ಳತನ ಮಾಡಿದ್ದಾರೆ.
ಬಡಾವಣೆಗೆ ಟಬ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ನಾಲ್ವರು ಹೆಂಗಸರು ಬರುತ್ತಿದ್ದರು. ಅವರೇ ಕದ್ದಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ಬರುತ್ತಿದ್ದ ಹೆಂಗಸರು ಮಗುವನ್ನು ಆಗಾಗ ನೋಡೋದು, ಮಾತನಾಡಿಸುವುದು ಮಾಡುತ್ತಿದ್ದರು. ಮಗು ಕಾಣೆಯಾದ ಬಳಿಕ ಮಹಿಳೆಯರು ಸಹ ನಾಪತ್ತೆಯಾಗಿದ್ದಾರೆ. ಆದ್ದರಿಂದ, ದಂಪತಿ ಸೇರಿದಂತೆ ನೆರೆಹೊರೆಯವರು ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಹಾಗೆಯೇ ಈ ಕುರಿತು ಕಡೂರು ಪೆÇಲೀಸ್ ಠಾಣೆಯಲ್ಲಿ ಮಗು ನಾಪತ್ತೆ ಬಗ್ಗೆ ದೂರು ದಾಖಲು ಮಾಡಲಾಗಿದೆ. ಮಗು ಜೊತೆಯಲ್ಲಿ ಇಲ್ಲ ಅನ್ನುವುದನ್ನು ತಾಯಿಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅನ್ನ, ನೀರು ಬಿಟ್ಟು ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ಬಡಾವಣೆಯ ಪ್ರತಿಯೊಬ್ಬರ ಬಳಿಯೂ ಮಗುವನ್ನು ಹುಡುಕಿಕೊಡಿ ಅಂತಾ ಅಂಗಲಾಚುತ್ತಿದ್ದಾರೆ.ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸಿ ಮಗುವನ್ನು ಹುಡುಕಬೇಕಿದೆ.