ಬಂಟ್ವಾಳದಲ್ಲಿ ನಿನ್ನೆ ರಾತ್ರಿಯಾದರೂ ಮುಗಿಯದ ಮತ ಎಣಿಕೆ, ಅವ್ಯವಸ್ಥೆಯ ಆಗರ ಆರೋಪ, ಮಾಧ್ಯಮ ಪ್ರತಿನಿಧಿಗಳಿಗೂ ಕಿರಿಕ್ – ಕಹಳೆ ನ್ಯೂಸ್
ಬಂಟ್ವಾಳ: ಇಲ್ಲಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಯಲ್ಲಿ ನಿನ್ನೆ ನಡೆದ ಮತ ಎಣಿಕೆ ಅವ್ಯವಸ್ಥೆಯ ಆಗರವಾಗಿ ಮಧ್ಯಾಹ್ನ ತನಕ ಪ್ರಥಮ ಸುತ್ತು ನಡೆದು ಬಳಿಕ ರಾತ್ರಿ ತನಕವೂ ಮೂರನೇ ಸುತ್ತು ಮುಂದುವರಿದೆ.
ತೀರಾ ನಿಧಾನಗತಿಯಲ್ಲಿ ನಡೆದ ಪ್ರಥಮ ಸುತ್ತಿನ ಮತ ಎಣಿಕೆ ಮುಗಿದು ಹೊರ ಬರುವಷ್ಟರಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಊಟವೂ ಸಿಗಲಿಲ್ಲ . ಸಂಜೆ ವೇಳೆ ಚಹಾ ತಿಂಡಿಯೂ ಸಿಕ್ಕಿಲ್ಲ ಎಂದು ದೂರಿಕೊಂಡಿದ್ದಾರೆ. ಅತೀ ಹೆಚ್ಚು ಗ್ರಾಮ ಪಂಚಾಯಿತಿ ಹೊಂದಿರುವ ಬಂಟ್ವಾಳದಲ್ಲಿ ಹೆಚ್ಚುವರಿ ಮತ ಎಣಿಕೆ ಟೇಬಲ್ ಅಳವಡಿಸುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಈ ಹಿಂದೆ ಚುನಾವಣಾ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮತ್ತು ಸಮನ್ವಯತೆ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಮಧ್ಯಾಹ್ನ 1 ಗಂಟೆ ತನಕ ಮಾಧ್ಯಮ ಪ್ರತಿನಿಧಿಗಳಿಗೆ ಫಲಿತಾಂಶ ವಿವರ ನೀಡದ ಅಧಿಕಾರಿಗಳು ಬಳಿಕ ಮಾಧ್ಯಮ ಕೇಂದ್ರವನ್ನೇ ಸ್ಥಳಾಂತರಿಸಿದರು. ಸಹಾಯಕ ಆಯುಕ್ತ ಮದನ್ ಮೋಹನ್ ಕೆಲವೊಂದು ಮಾಧ್ಯಮ ಪ್ರತಿನಿಧಿಗಳ ಮೊಬೈಲ್ ಕಸಿದುಕೊಂಡು ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಹಶೀಲ್ದಾರ್ ಅನಿತಾಲಕ್ಷ್ಮಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಕೆಲವೊಮ್ಮೆ ಮತ ಎಣಿಕೆ ಕೊಠಡಿ ಘೋಷಣೆಯಲ್ಲಿಯೂ ಗೊಂದಲ ಕಂಡು ಬಂದಿದೆ. ಮೊಡಂಕಾಪು ಮೈದಾನ ಎದುರು ಪೊಲಿಸ್ ಬಿಗಿ ಬಂದೋಬಸ್ತು ಏರ್ಪಡಿಸಿದ್ದು, ರಸ್ತೆಯುದ್ದಕ್ಕೂ ವಿವಿಧ ರಾಜಕೀಯ ಪಕ್ಷಗಳ ಸಾವಿರಾರು ಮಂದಿ ಕಾರ್ಯಕರ್ತರು ಜಮಾಯಿಸಿದ್ದರು. ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಗ್ರಾಮಾಂತರ ಮತ್ತು ನಗರ ಠಾಣೆ ಎಸೈ ಪ್ರಸನ್ನ ಎಂ., ಅವಿನಾಶ್ ಗೌಡ, ಸಂಚಾರಿ ಠಾಣೆ ಎಸೈ ಬಾಲಕೃಷ್ಣ ಗೌಡ, ಎಎಸೈ ಎಂ.ಕೆ.ಕುಟ್ಟಿ ಮತ್ತಿತರರು ಇದ್ದರು.