ಬೆಂಗಳೂರು: ನಕಲಿ ಅಕೌಂಟ್ ಸೃಷ್ಟಿಸಿ ಕಿರುತೆರೆ ನಟಿ ಅಶ್ವಿನಿ ಗೌಡ ಅವರಿಗೆ ವಿಜಯನಗರದ ಆರ್ ಪಿಸಿ ಲೇಔಟ್‍ನಲ್ಲಿರುವ ಜನತಾ ಸೇವಾ ಕೋ ಅಪರೇಟಿವ್ ಬ್ಯಾಂಕಿನಿಂದ ವಂಚನೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಗಳು ಅಶ್ವಿನಿಗೌಡ ಹೆಸರಲ್ಲಿ ನಕಲಿ ಖಾತೆ ತೆರೆದು ನಕಲಿ ವಹಿವಾಟು ನಡೆಸುತ್ತಿದ್ದು, ಜನತಾ ಸೇವಾ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೇರಿದಂತೆ ನಾಲ್ವರ ವಿರುದ್ಧ ಈಗ ನಟಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ ?
ಆಗಸ್ಟ್ 8, 2014ರಂದು ರಾಜಾಜಿನಗರ ಪೊಲೀಸ್ ಠಾಣೆಯಿಂದ ವಾರಂಟ್ ಇದೆ ಎಂದು ಹೇಳಿ ಫೋನ್ ಬಂದಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ಹೋಗಿ ವಿಚಾರಿಸಿದಾಗ ನನ್ನ ಮೇಲೆ 25 ಲಕ್ಷ ರೂ. ಚೆಕ್ ಬೌನ್ಸ್ ಕೇಸ್ ದಾಖಲಾಗಿರುವ ವಿಚಾರ ತಿಳಿಯಿತು. ಹೇಗೆ ಚೆಕ್ ಬೌನ್ಸ್ ಕೇಸ್ ದಾಖಲಾಯಿತು ಎಂದು ಪರಿಶೀಲನೆ ನಡೆಸಿದಾಗ ಜನತಾ ಸೇವಾ ಕೋ ಅಪರೇಟಿವ್ ಬ್ಯಾಂಕಿನಲ್ಲಿ ಗೆಳೆಯರ ಬಳಗದ ಹೆಸರಿನಲ್ಲಿ ಎಸ್‍ಬಿ ಖಾತೆ ತೆರೆದಿರುವ ವಿಚಾರ ಗಮನಕ್ಕೆ ಬಂತು. ಈ ವಿಚಾರ ತಿಳಿದು ಬ್ಯಾಂಕ್ ಮ್ಯಾನೇಜರ್ ಭಾಗ್ಯ ಹತ್ತಿರ ಪ್ರಶ್ನಿಸಿದಾಗ, ಜಯರಾಮ ಎಂಬವರು ಖಾತೆಯನ್ನು ತೆರೆದು ವ್ಯವಹಾರ ಮಾಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರು. ನಂತರ ಬ್ಯಾಂಕಿನ ಅಧ್ಯಕ್ಷರಾದ ರಾಮುರವರು ನನಗೆ ಜಯರಾಮರವರ ಪರಿಚಯವಿದೆ ಎಂದು ತಿಳಿಸಿದರು.
ನನ್ನ ಅನುಮತಿ ಇಲ್ಲದೇ ಖಾತೆಯನ್ನು ತೆರೆಯಲು ಹೇಗೆ ಅನುಮತಿ ನೀಡಿದ್ದೀರಿ ಎನ್ನುವ ಪ್ರಶ್ನೆಗೆ ಬ್ಯಾಂಕಿನವರು ಯಾರು ಸಮಂಜಸವಾದ ಕಾರಣ ನೀಡಲಿಲ್ಲ. ವೈಯಕ್ತಿಕ ದ್ವೇಷದಿಂದ ನನ್ನ ಹೆಸರಿನಲ್ಲಿ ಖಾತೆ ತೆರೆದು ವಂಚಿಸಿದಲ್ಲದೇ 25 ಲಕ್ಷ ರೂ. ಚೆಕ್ ಗೆ ನಕಲಿ ಚೆಕ್ ಬರೆದು ಬೌನ್ಸ್ ಮಾಡಿ ನನ್ನ ವಿರುದ್ಧ ಕೇಸ್ ದಾಖಲಾಗುವ ಹಾಗೇ ಮಾಡಿದ್ದಾರೆ. ಹೀಗಾಗಿ ಬ್ಯಾಂಕಿನ ಅಧ್ಯಕ್ಷರಾದ ರಾಮು, ಮ್ಯಾನೇಜರ್ ಭಾಗ್ಯ, ಜಯರಾಮು ಡಿ.ಜಿ, ವೆಂಕಟೇಶ್ ಹಾಗೂ ಚೇತನ್ ಪಿತೂರಿ ನಡೆಸಿ ಹಣ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.