Recent Posts

Sunday, January 19, 2025
ಪುತ್ತೂರು

ಆಫ್‌ಲೈನ್ ತರಗತಿ ನಡೆಸಲು ಸಿದ್ದತೆಯನ್ನು ಪೂರ್ಣಗೊಳಿಸಿದ ವಿವೇಕಾನಂದ ಪಿಯು ಕಾಲೇಜು – ಕಹಳೆ ನ್ಯೂಸ್

ಪುತ್ತೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ನಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ಜನವರಿ ಒಂದರಿಂದ ಆರಂಭವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಆದೇಶದಂತೆ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಭೌತಿಕ ತರಗತಿ ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ.

ಎಲ್ಲಾ ತರಗತಿ ಕೊಠಡಿಗಳಿಗೆ, ಹೊರಾಂಗಣಗಳಿಗೆ ಸ್ಯಾನಿಟೈಸರ್‌ನ್ನು ಯಂತ್ರದ ಮೂಲಕ ಸಿಂಪಡಿಸಿ ಶುದ್ಧತೆಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಮಾಸ್ಕ್ , ಪ್ರತಿಯೊಬ್ಬ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ತೋರಿಸುವ ಥರ್ಮೋಮೀಟರ್‌ನ್ನು ಕಾಲೇಜಿನಲ್ಲಿ ಅಳವಡಿಸಲಾಗಿದೆ. ಜನದಟ್ಟಣೆ ಪ್ರದೇಶಗಳಿಗೆ ತೆರಳದೆ ಇರುವುದು, ಕೈಗಳನ್ನು ಸ್ವಚ್ಛತೆಯಿಂದ ಇರಿಸಿಕೊಳ್ಳುವ ಕುರಿತಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳ ದೈಹಿಕ ಚಲನವಲನ ಹಾಗೂ ಮಾನಸಿಕ ಆರೋಗ್ಯದ ಕುರಿತಂತೆಯೂ ಗಮನ ಹರಿಸಲು ಸಿದ್ದತೆ ಕೈಗೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ವಿದ್ಯಾರ್ಥಿಗಳು ಹೆತ್ತವರ ಅನುಮತಿ ಪತ್ರವನ್ನು ಕಡ್ಡಾಯವಾಗಿ ತರಬೇಕಾಗಿದ್ಧು, ಇದರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಇಲ್ಲವೆಂಬುದನ್ನು ಹೆತ್ತವರು ದೃಢೀಕರಿಸಬೇಕಾಗಿದೆ. ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡಿದ್ದು, ಕಾಲೇಜಿನ ಬೋಧನಾ ಕೊಠಡಿ, ಪ್ರಯೋಗಾಲಯಗಳು, ಪುರುಷರ ಹಾಗೂ ಹೆಣ್ಮಕ್ಕಳ ವಸತಿನಿಲಯ ಹಾಗೂ ಇನ್ನಿತರ ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಕಾಲೇಜಿನ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದ್ದು, ಸೋಪ್ ಮತ್ತು ಹ್ಯಾಂಡ್‌ವಾಷ್ ವ್ಯವಸ್ಥೆಯನ್ನು ಮಾಡಲಾಗಿದೆ. ತರಗತಿಗಳಿಗೆ ಹಾಜರಾಗಲು ಆಗಮಿಸುವ ವಿದ್ಯಾರ್ಥಿಗಳು ಗುಂಪು ಸೇರದಂತೆ ಜಾಗರೂಕತೆ ವಹಿಸಲು ಹಾಗೂ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ವಿಶೇಷ ನಿಗಾ ವಹಿಸಲು ಉಪನ್ಯಾಸಕರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಹೊರಾಂಗಣದ ನೆಲದ ಮೇಲೆ ಆರು ಅಡಿಗಳ ಅಂತರದಲ್ಲಿ ಗುರುತು ಹಾಕಿ ಎಲ್ಲಾ ವಿದ್ಯಾರ್ಥಿಗಳು ಸಾಲಿನಲ್ಲಿ ಚಲಿಸಲು ಅನುವು ಮಾಡಿಕೊಡಲಾಗುವುದು. ಶಿಕ್ಷಣ ಇಲಾಖೆ ಹೊರಡಿಸಿದ ನಿಯಮದನ್ವಯ ಪ್ರತಿ ತರಗತಿಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಗಮನವನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಇತರರಿಂದ ಪ್ರತ್ಯೇಕಿಸಲು ವಿಶೇಷವಾದ ಕೊಠಡಿಗಳನ್ನು ಗುರುತಿಸಲಾಗಿದ್ದು, ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ.
ತರಗತಿಗಳು ನಡೆಯುವ ಸಮಯದಲ್ಲಿ ಉಪನ್ಯಾಸಕರು ಮಾಸ್ಕ್ ಗಳನ್ನು ಬಳಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಾಂಶುಪಾಲ ಮಹೇಶ್ ನಿಟಿಲಾಪುರರವರ ನೇತೃತ್ವದಲ್ಲಿ ಕಾಲೇಜು ಆಡಳಿತ ವಿಭಾಗದ ಸಿಬ್ಬಂದಿಗಳು ಶುದ್ಧತೆಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.