ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದೆ. ಇನ್ನು ಸುಲಭವಾಗಿ ಸಾಲ ಸಿಗುತ್ತೆ ಎಂದುಕೊಂಡಿದ್ದ ರೈತರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ರಾಜ್ಯ ಸರ್ಕಾರ ಸಾಲವನ್ನು ಮನ್ನಾ ಮಾಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಸಾಲದ ಹಣವನ್ನು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಸಹಕಾರ ಸಂಘಗಳಲ್ಲಿ ಹಣವಿಲ್ಲದೇ, ಹೊಸ ಸಾಲ ಪಡೆಯುವ ರೈತರಿಗೆ ಸಮಸ್ಯೆಯಾಗಿದೆ.
8165 ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದ್ದು, 2878 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 5287 ಕೋಟಿ ರೂ. ಬಾಕಿ ಹಣ ಬಿಡುಗಡೆಯಾಗಬೇಕಿದೆ. ಡಿ.ಸಿ.ಸಿ. ಬ್ಯಾಂಕ್ ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ಹಣಕಾಸಿನ ತೊಂದರೆಯಲ್ಲಿವೆ.
ಅಪೆಕ್ಸ್ ಬ್ಯಾಂಕ್ ನಿಂದ ಡಿ.ಸಿ.ಸಿ. ಬ್ಯಾಂಕ್ ಗಳಿಗೆ ಸಾಲ ನೀಡಲಾಗುತ್ತದೆ. ಈ ಸಾಲ ಡಿ.ಸಿ.ಸಿ. ಬ್ಯಾಂಕ್ ನಿಂದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಿಡುಗಡೆಯಾಗುತ್ತದೆ. ಬಳಿಕ ರೈತರಿಗೆ ಸಾಲವನ್ನು ನೀಡಲಾಗುತ್ತದೆ. ಆದರೆ, ಸಾಲದ ಹಣ ಬಿಡುಗಡೆ ಆಗಿಲ್ಲ. ಇತ್ತ ಸಾಲವೂ ತೀರದೇ, ಹೊಸ ಸಾಲವೂ ಸಿಗದೇ ರೈತರು ತೊಂದರೆ ಅನುಭವಿಸುವಂತಾಗಿದೆ.
ಸದೃಢವಾಗಿರುವ ಸಹಕಾರಿ ಬ್ಯಾಂಕ್, ಸಹಕಾರ ಸಂಘಗಳು ಬೇರೆ ಹಣವನ್ನು ಹೊಂದಿಸಿ ರೈತರಿಗೆ ಹೊಸ ಸಾಲ ನೀಡಲು ಮುಂದಾಗಿವೆ. ಸರ್ಕಾರದ ಹಣ ಬಿಡುಗಡೆಯಾದಾಗ ಅದನ್ನು ಹೊಂದಿಸಿಕೊಳ್ಳಲಿವೆ. ಆದರೆ, ಹೆಚ್ಚಿನ ಸಹಕಾರ ಸಂಘಗಳು ಸರ್ಕಾರದ ಹಣವನ್ನೇ ಅವಲಂಬಿಸಿರುವುದರಿಂದ ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ.