ಪುತ್ತೂರು : ಪ್ರಸ್ತುತ ಕಾಲಘಟ್ಟದಲ್ಲಿ ಐಟಿ ಕ್ಷೇತ್ರಗಳಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ವಿಫುಲವಾದ ಅವಕಾಶಗಳಿವೆ. ಆದರೆ ವೃತ್ತಿ ಕೌಶಲ್ಯದ ಅಗತ್ಯತೆಯು ಕೂಡಾ ಬಹಳಷ್ಟಿದೆ ಎಂದು ವಿಪ್ರೋ ಸಂಸ್ಥೆಯ ಉದ್ಯೋಗಿ ಹಾಗೂ ಕಾಲೇಜಿನ ಬಿಸಿಎ ವಿಭಾಗದ ಹಳೆ ವಿದ್ಯಾರ್ಥಿ ನಂದನ್ ಜಿ.ಆರ್. ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಗಣಕ ಶಾಸ್ತ್ರ ವಿಭಾಗ ಹಾಗೂ ಉದ್ಯೋಗ ಹಾಗೂ ತರಬೇತಿ ವಿಭಾಗ ಜಂಟಿಯಾಗಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಐಟಿ ಕಂಪನಿಗಳ ಆಯ್ಕೆ ಪ್ರಕ್ರಿಯೆ ಹಾಗೂ ತರಬೇತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಐಟಿ ಕಂಪನಿಗಳಲ್ಲಿ ಉದ್ಯೋಗಿಗಳಾಗಬೇಕಾದರೆ ಸಮರ್ಪಕವಾದ ಸಂವಹನದ ಅಗತ್ಯವಿದೆ. ಎಂತಹ ಪರಿಸ್ಥಿತಿಗಳಿಗೂ ಕೂಡಾ ನಾವು ಹೊಂದಿಕೊಂಡು ಹೋಗುವ ಗುಣ ನಮ್ಮಲ್ಲಿದ್ದರೆ ಕಂಪನಿ ಉದ್ಯೋಗದಲ್ಲಿ ಉಳಿದುಕೊಳ್ಳಬಹುದು. ಐಟಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕಾದರೆ ನಮಗೆ ಪ್ರಸ್ತುತ ವಿದ್ಯಮಾನಗಳ ಬಗೆಗೆ ಜ್ಞಾನವಿರಬೇಕು ಹಾಗೂ ಯಾವ ಕ್ಷೇತ್ರಗಳಲ್ಲಿ ಹೆಚ್ಚು ಬೇಡಿಕೆ ಇದೆ ಎಂಬುವುದನ್ನು ತಿಳಿದುಕೊಂಡು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ. ಭಟ್ ಮಾತನಾಡಿ, ಕೊರೋನಾ ವೈರಸ್ ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯನ್ನು ತಂದೊಡ್ಡಿದರೂ ಕೂಡಾ ನಾವು ಆತ್ಮವಿಶ್ವಾಸದಿಂದ ಮುಂದುವರೆಯಬೇಕಾಗಿದೆ ಎಂದರು. ಈ ಸಂದರ್ಭ ವೇದಿಕೆಯಲ್ಲ್ಲಿ ಕಾಲೇಜಿನ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ. ಕಾಲೇಜಿನ ಉದ್ಯೋಗ ಮತ್ತು ತರಬೇತಿ ವಿಭಾಗದ ಸಂಯೋಜಕ ಸೂರ್ಯನಾರಾಯಣ ಪಿ.ಎಸ್. ಇವರು ಉಪಸ್ಥಿತರಿದ್ದರು. ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕಿ ಜೀವಿತಾ ಎನ್.ಕೆ. ಕಾರ್ಯಕ್ರಮ ನಿರ್ವಹಿಸಿದರು.