ಬ್ರಹ್ಮಾವರ: ಬಾರಕೂರಿನ ಶಿವಗಿರಿಯಲ್ಲಿ ಶುಕ್ರವಾರ ನಡೆದ ಮದುವೆ ದಿಬ್ಬಣ ವಿಶೇಷ ರೀತಿಯಲ್ಲಿತ್ತು. ಕೃಷಿ ಸಂಸ್ಕೃತಿಯ ಪರಂಪರೆಯನ್ನು ಹೊಂದಿದ ಬಾರಕೂರಿನ ಕಾಳಿಕಾಂಭಾ ದೇವಸ್ಥಾನದ ಎದುರು ಗಡೆ ಮನೆಯ ದಿವಂಗತ ಜಾರು ಪೂಜಾರಿಯವರದು.
ಇಂದಿಗೂ ಇವರ ಮಗ ಮಂಜಪ್ಪನವರು ಭತ್ತದ ಬೆಳೆಯಲ್ಲಿ ವಿಶೇಷ ಸಾಧನೆ ಮಾಡಿದ್ದು, 500 ಮುಡಿ ಭತ್ತದ ತಿರಿಯನ್ನು ಮಾಡುವ ಹಳೆ ಪದ್ಧತಿಯನ್ನು ಜೀವಂತ ಇರಿಸಿಕೊಂಡು ಬಂದಿದ್ದಾರೆ. ಇವರು ಅವಿಭಾಜ್ಯ ಕುಟುಂಬ ಪದ್ಧತಿಯನ್ನು ಇಂದೂ ಕೂಡಾ ಮುನ್ನಡೆಸಿಕೊಂಡು ಬಂದು ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡವರು. ಅವರ ಮನೆಯ ಇಬ್ಬರು ಯುವಕರಾದ ಗಣೇಶ ಹಾಗೂ ಪ್ರಮೋಧ್ ಅವರ ಮದುವೆ ಬಾರಕೂರು ಶಿವಗಿರಿ ಕ್ಷೇತ್ರದ ಗುರುದೇವ ಭವನದಲ್ಲಿ ನಡೆದ ಮಧುಮಕ್ಕಳ ದಿಬ್ಬಣ ಆಧುನಿಕ ವಾಹನದಲ್ಲಿ ಹೋಗುವ ಬದಲಾಗಿ ಹೊಸದಾಗಿ ಕೊಂಡುಕೊಂಡ, ಉಳುಮೆ ಯಂತ್ರದಲ್ಲಿ ಮದುಮಕ್ಕಳು ಮದುವೆ ಹಾಲ್‍ಗೆ ಕುಟುಂಬ ಸಮೇತ ಮೆರವಣಿಗೆಯಲ್ಲಿ ಸಾಗಿ ಬಂದರು.
ಮನೆಯ ಇನ್ನೊಬ್ಬ ಸದಸ್ಯ ನಿತೀನ್ ಟ್ಯಾಕ್ಟರ್ ಚಾಲನೆಯಲ್ಲಿ ಸಹಕರಿಸಿದ್ದು, ಬೆಳಗ್ಗೆ ಹಾಗೂ ಸಂಜೆ ಮದುವಣ ಗಿತ್ತಿಯರನ್ನು ಕೂಡ ಟ್ಯಾಕ್ಟರ್‍ನಲ್ಲಿಯೇ ಹೋಗಿ ಮನೆತುಂಬಿಸಿಕೊಂಡರು. ಇದೊಂದು ಹೊಸ ರೀತಿಯಲ್ಲಿ ನಡೆದ ಮದುವೆಯ ಮೆರವಣಿಗೆಯನ್ನು ನೋಡಲು ಬಾರಕೂರು ಜನರು ರಸ್ತೆಯ ಇಕ್ಕೆಲಗಳಲ್ಲಿ ನೋಡಿ ಕಣ್ಣುತುಂಬಿಕೊಂಡರು. ದಿನೇ ದಿನೇ ಆಧಿನಿಕ ವಿದ್ಯಮಾನಗಳಿಗೆ ಮಾರು ಹೋಗುವ ಜನರ ಮುಂದೆ ಕೃಷಿ ಸಂಸ್ಕೃತಿಗೆ ಉತ್ತೇಜನ ನೀಡುವ ಇವರ ಕಲ್ಪನೆ ವಿನೂತನವಾಗಿದೆ.