ವಿವೇಕಾನಂದ ಕ್ಯಾಂಪಸ್‍ನಲ್ಲಿ ವಿವೇಕಾನಂದ ಜಯಂತಿ ಹಾಗೂ ವಿಚಾರ ಸಂಕಿರಣ; ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಜ.12ರಂದು ‘ವಿವೇಕಾನಂದ ಜಯಂತಿ’ ಆಚರಣೆ- ಕಹಳೆ ನ್ಯೂಸ್
ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ಆಶ್ರಯದಲ್ಲಿ ಜ.12 ರಂದು ನೆಹರುನಗರದ ವಿವೇಕಾನಂದ ಆವರಣದಲ್ಲಿ ‘ವಿವೇಕಾನಂದ ಜಯಂತಿ’ ಆಚರಣೆ ಹಾಗೂ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತಾಗಿ ವಿಚಾರ ಸಂಕಿರಣ ನಡೆಯಲಿದೆ.
ವಿವೇಕಾನಂದ ಆವರಣದಲ್ಲಿರುವ ‘ಕೇಶವ ಸಂಕಲ್ಪ’ ಸಭಾಂಗಣದಲ್ಲಿ ಪೂರ್ವಾಹ್ನ 9.30ಕ್ಕೆ ವಿವೇಕಾನಂದ ಜಯಂತಿ ಆಚರಣೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ್ ಭಟ್ ವಹಿಸಲಿರುವರು. ಮುಖ್ಯ ಅತಿಥಿಯಾಗಿ ಹುಬ್ಬಳ್ಳಿಯ ‘ಪ್ರಜ್ಞಾ ಪ್ರವಾಹ’ದ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕ ರಘುನಂದನ ಭಾಗವಹಿಸಲಿರುವರು. ಸುವಿಚಾರ ಹಾಗೂ ಸಮಾಜಮುಖಿ ವಿಷಯಗಳನ್ನು ಹಲವು ದಶಕಗಳಿಂದ, ತನ್ನ ವಿವಿಧ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ನೀಡುತ್ತಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ; ಪ್ರತಿಬಾರಿಯಂತೆ ವಿವೇಕಾನಂದ ಜಯಂತಿಯೊಂದಿಗೆ, ಸಾಮಾಜಿಕ ಅರಿವು ಮೂಡಿಸುವ ನೆಲೆಯಲ್ಲಿ ವಿಚಾರ ಸಂಕಿರಣವನ್ನೂ ಹಮ್ಮಿಕೊಂಡಿದೆ. ಏಕಕಾಲಕ್ಕೆ ಮೂರು ವಿಭಾಗಗಳಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತು ವಿಚಾರ ಸಂಕಿರಣ ನಡೆಯಲಿದೆ. ವಿವೇಕಾನಂದ ವಿದ್ಯಾಸಂಸ್ಥೆಗಳ ಮುಖ್ಯ ಉದ್ದೇಶ ಪಠ್ಯ ಕಲಿಕೆಯ ಜೊತೆಗೆ ಜೀವನ ಶಿಕ್ಷಣ, ಹಾಗೂ ರಾಷ್ಟ್ರೀಯ ಚಿಂತನೆಯ ವಿಚಾರಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ, ತನ್ಮೂಲಕ ಸಮಾಜಕ್ಕೆ ನೀಡುವಂತಹದ್ದು. ಈ ನೆಲೆಗಟ್ಟಿನಲ್ಲಿ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ವ್ಯವಸ್ಥೆಯನ್ನು ಅರ್ಥೈಸುವ ದೃಷ್ಟಿಯಿಂದ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ವಿವೇಕಾನಂದ ಸ್ನಾತಕೋತ್ತರ ಕೇಂದ್ರದ ‘ಸೆಮಿನಾರ್ ಹಾಲ್’ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ಶಿಕ್ಷಣ’ ಎಂಬ ವಿಚಾರದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ವಿವೇಕಾನಂದ ಪದವಿ ಮಹಾವಿದ್ಯಾಲಯದ ‘ಬೈಂದೂರು ಪ್ರಭಾಕರ ರಾವ್ ಸಭಾಂಗಣ’ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ. ವಿಜಯ ಸರಸ್ವತಿ, ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರೌಢ ಹಾಗೂ ಪದವಿಪೂರ್ವ ಹಂತದ ಶಿಕ್ಷಣ’ ಎಂಬ ವಿಚಾರದ ಕುರಿತಾಗಿ ವಿಷಯ ಮಂಡನೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಪ್ರೊ. ಕರುಣಾಕರ್ ಅವರು, ವಿವೇಕಾನಂದ ಮಹಾವಿದ್ಯಾಲಯದ ‘ಸುವರ್ಣ ಮಹೋತ್ಸವ ಸಭಾಂಗಣ’ದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ’ ಎಂಬ ವಿಚಾರವಾಗಿ ವಿಷಯ ಮಂಡನೆ ಮಾಡಲಿರುವರು.