Saturday, November 23, 2024
ಪುತ್ತೂರು

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಜಯಂತಿ ಆಚರಣೆ ಮಕ್ಕಳಲ್ಲಿನ ಸೃಜನಶೀಲತೆಯನ್ನು ಚಿವುಟದಿರಿ: ರಘುನಂದನ- ಕಹಳೆ ನ್ಯೂಸ್

ಪುತ್ತೂರು : ಭಾರತದ ಆಡಳಿತವರ್ಗ ಚೆನ್ನಾಗಿ ನೀತಿಯನ್ನು ರೂಪಿಸಿದರೂ ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವುದರಲ್ಲಿ ಸೋಲುತ್ತಿದ್ದೇವೆ. ಆದ್ದರಿಂದ ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವಲ್ಲಿ ಸೋತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರೊಂದಿಗೆ ವಸಾಹತುಶಾಹಿ ಮನಸ್ಥಿತಿ ನಮ್ಮನ್ನು ನಿಯಂತ್ರಿಸುತ್ತಿದೆ. ಈ ಬಗೆಯ ಪರಿಸ್ಥಿತಿಯಿಂದ ಇಂದು ತುರ್ತಾಗಿ ಹೊರಗೆ ಬರುವ ಅಗತ್ಯವಿದೆ. ಈ ಎಲ್ಲಾ ತೊಂದರೆಗಳ ನಡುವೆಯೂ ಭಾರತ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ಸ್ವಾತಂತ್ರ್ಯವನ್ನು ನೀಡುವಾಗ ವಸಾಹತುಶಾಹಿ ಆಡಳಿತ ಭಾರತವನ್ನು ತೀರಾ ನಿರ್ಲಕ್ಷ್ಯದಿಂದ ನೋಡಿತ್ತು. ಆದರೆ ಇಂದು ಜಗತ್ತಿನ ಎಲ್ಲಾ ದೇಶಗಳು ಭಾರತದ ಕಡೆಗೆ ಭರವಸೆಯ ದೃಷ್ಟಿಯಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹುಬ್ಬಳಿಯ ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ರಘುನಂದನ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರಗೋಷ್ಠಿಗೆ ಪೂರ್ವಭಾವಿಯಾಗಿ ದಿಕ್ಸೂಚಿ ಮಾತುಗಳನ್ನಾಡಿದರು. ವರ್ತಮಾನದ ಬದುಕಿನಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಭಾರತೀಯರ ಮನಸ್ಥಿತಿಯಲ್ಲಿ ಬದಲಾವಣೆಗಳನ್ನು ತರುವ ಅಗತ್ಯವಿದೆ. ಶಿಕ್ಷಣದಲ್ಲಿ ಹೇಳಿಕೊಟ್ಟಂತೆ ಕಲಿಯಬೇಕು, ಸ್ವತಂತ್ರವಾಗಿ ಯೋಚಿಸಲು ಅರ್ಹರಲ್ಲ ಎನ್ನುವ ಪೂರ್ವಾಗ್ರಹ ಇಂದಿನ ಶಿಕ್ಷಣ ಕ್ಷೇತ್ರದಲ್ಲಿದೆ. ಇದು ನಮ್ಮಲ್ಲಿ ಗುಲಾಮಗಿರಿಯ ಮನಸ್ಥಿತಿ ಬೆಳೆಯಲು ಕಾರಣವಾಗಿದೆ. ಇಂದು ಭಾರತಿಯರು ಪ್ರಪಂಚದ ಉನ್ನತ ಕಂಪನಿಗಳನ್ನು ಮುನ್ನಡೆಸುವ ಹುದ್ದೆಗಳಲ್ಲಿದ್ದಾರೆ. ಆದರೆ ಆ ಕಂಪೆನಿಗಳ ಮಾಲಿಕರು ವಿದೇಶಿಯರಾಗಿದ್ದಾರೆ. ಈ ಬಗೆಯ ಪರಿಸ್ಥಿತಿ ಬದಲಾಗಿ ಭಾರತೀಯರೇ ಕಂಪನಿಗಳ ಮಾಲಿಕರಾಗುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಟ್ಟರು. ಶೈಕ್ಷಣಿಕ ಕಲಿಕೆಯ ವ್ಯಾಪ್ತಿ ಇಂದು ಸಂಕುಚಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಬ್ರಿಟಿಷರು ಅಂದು ಪರಿಚಯಿಸಿದ್ದ ಶಿಕ್ಷಣ ವ್ಯವಸ್ಥೆ. ಆಡಳಿತ ದೃಷ್ಟಿಯಿಂದ ಅವರಿಗೆ ಗುಲಾಮರಾಗಿ ದುಡಿಯಬಲ್ಲ ಭಾರತೀಯ ವಿದ್ಯಾವಂತರ ಅವಶ್ಯಕತೆ ಇತ್ತು. ಆ ಉದ್ದೇಶದಿಂದ ಬ್ರಿಟಿಷರು ತಮಗೆ ಅನುಕೂಲವಾದ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರು. ಇಂದು ಮಕ್ಕಳಲ್ಲಿರುವ ಸೃಜನ ಶೀಲಗುಣವನ್ನು ಪೋಷಿಸುವ ಅಗತ್ಯವಿದೆ. ಆದರೆ ವರ್ತಮಾನದ ಶಿಕ್ಷಣವು ಶಿಸ್ತಿನ ಹೆಸರಿನಲ್ಲಿ ಅವರ ಸೃಜನಶೀಲತೆಗಳನ್ನು ಕೊಲ್ಲಲಾಗುತ್ತಿದೆ. ಸ್ವಾಯತ್ತತೆಯ ಕೊರತೆ ಇಂದಿನ ಜನಾಂಗದಲ್ಲಿ ಎದ್ದು ಕಾಣುತ್ತಿದೆ. ಕ್ರಿಯಾತ್ಮಕತೆ, ಸ್ವಂತಿಕೆ ನಾಶವಾದಾಗ ಗುಲಾಮತನ ನಮ್ಮನ್ನು ಆಳಲು ಆರಂಭಿಸುತ್ತದೆ. ಪಠ್ಯ ಶಿಕ್ಷಣದ ಜೊತೆಯಾಗಿ, ಜೀವನ ನಿರ್ವಹಣೆಗೆ ಅವಶ್ಯಕತೆಯಿರುವ ವಿಚಾರಗಳನ್ನು ಕಲಿಸುವುದು ಇಂದಿನ ಅಗತ್ಯವಾಗಿದೆ. ಅಂತಹ ಜೀವನ ಶಿಕ್ಷಣ ಇಂದಿನ ವಿದ್ಯಾವಂತ ವರ್ಗದಲ್ಲಿ ಅಪರೂಪವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ವಿದ್ಯಾರ್ಥಿಯ ವ್ಯಕ್ತಿತ್ವನ್ನು ರೂಪಿಸುವಲ್ಲಿ ಶಿಕ್ಷಕರಿಗೆ ಮಹತ್ತರವಾದ ಜವಾಬ್ದಾರಿಯಿದೆ. ಮಕ್ಕಳಲ್ಲಿ ಪ್ರಶ್ನಿಸುವ, ಕುತೂಹಲವನ್ನು ಮೂಡಿಸುವ ರೀತಿಯಲ್ಲಿ ಮಗುವಿನ ಕಲಿಕೆಯನ್ನು ರೂಪಿಸುವ ಅಗತ್ಯವಿದೆ. ನಮ್ಮ ಪುರಾಣಗಳು, ಗೀತೆಗಳು ಎಲ್ಲವೂ ಇದನ್ನೇ ಸಾರಿವೆ. ರಾಷ್ಟ್ರ ಭಕ್ತಿ, ರಾಷ್ಟ್ರಿಯ ಚಿಂತನೆಗಳನ್ನು ಒಮ್ಮೆ ಭಾರತೀಯರು ಸನಾತನ ಚಿಂತನೆಗಳ ಆಧಾರದ ಮೇಲೆ ಅಳವಡಿಸಿಕೊಂಡರೆ ನಮ್ಮ ಅಭ್ಯುದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜಗತ್ತಿನ ಪರಿವರ್ತನೆ ನಮ್ಮಿಂದಲೇ ಪ್ರಾರಂಭವಾಗಬೇಕು ಎಂದರು.
ಭಾರತ ಮಾತೆಗೆ ಹಾಗೂ ಸ್ವಾಮಿ ವಿವೇಕಾನಂದರಿಗೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ಉಪನ್ಯಾಸಕಿ ಜಯಲಕ್ಷಿ ಎಸ್. ಪ್ರಾರ್ಥಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಸ್ವಾಗತಿಸಿ ಪ್ರ್ರಸ್ತಾವನೆಯ ಮಾತುಗಳನ್ನಾಡಿದು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ. ಸುಧಾ ರಾವ್ ವಂದಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಚಂದ್ರಕುಮಾರ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಜಯಂತಿಯ ಅಂಗವಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತಾಗಿ ಏಕಕಾಲಕ್ಕೆ ಮೂರು ವಿಭಾಗಗಳಲ್ಲಿ ವಿಚಾರ ಸಂಕಿರಣ ನಡೆಯಿತು. ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ಶಿಕ್ಷಣ’ ಎಂಬ ವಿಚಾರದ ಕುರಿತಾಗಿ ವಿಷಯ ಮಂಡಿಸಿದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಮಾತನಾಡಿ, ಭಾರತದ ಶಿಕ್ಷಣ ನೀತಿಯು ಉಪನಿಷತ್ತಿನ ಆಧಾರದ ಮೇಲೆ ಪ್ರಾರಂಭವಾಗಿದೆ. ಶಿಕ್ಷಣ ಎನ್ನುವುದು ನೇರಾ ನೇರವಾಗಿರಬೇಕು ವಿದ್ಯಾರ್ಥಿ ಪ್ರಶ್ನೆ ಕೇಳಬೇಕು ಗುರುಗಳು ಉತ್ತರ ನೀಡಬೇಕು ಎನ್ನುವುದು ನಮ್ಮ ಭಾರತದ ಪದ್ದತಿ, ಆದರೆ ನಾವು ಬ್ರಿಟಿಷ್ ಶಿಕ್ಷಣ ನೀತಿಯನ್ನು ಅನುಸರಿಸುತ್ತಿದ್ದೇವೆ ಆ ನೀತಿಗಳು ಬದಲಾಗಬೇಕು ಎಂದರು. ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರೌಢ ಮತ್ತು ಪದವಿಪೂರ್ವ ಹಂತದ ಶಿಕ್ಷಣ’ ಎಂಬ ವಿಚಾರದ ಕುರಿತಾಗಿ ವಿಷಯ ಮಂಡಿಸಿದ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ. ವಿಜಯ ಸರಸ್ವತಿ ಮಾತನಾಡಿ, ಮಗುವಿನ ಮನಸ್ಥಿತಿಯನ್ನು ಹೊರಗಿನ ಒತ್ತಡವಿಲ್ಲದೆ, ತನ್ನೊಳಗಿನ ಸೃಜನಶೀಲತೆಯನ್ನು ಅನಾವರಣಗೊಳಿಸಿ ಸಮಾಜಮುಖಿಯಾಗಿ ಬದುಕಲು ಕಲಿಸುವ ಸುಂದರ ಕಲ್ಪನೆಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ. ಮೂಲ ಭಾರತೀಯ ಶಿಕ್ಷಣವನ್ನೇ ಈಗ ವಿವೇಕಾನಂದರ ಕಲ್ಪನೆಯೊಂದಿಗೆ ಆಧುನಿಕ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತೆ ಜಾರಿ ಮಾಡಲಾಗಿದೆ. ಏಕರೂಪ ಶಿಕ್ಷಣ ಪದ್ದತಿ ಇದರ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ’ ಎಂಬ ವಿಚಾರದ ಕುರಿತಾಗಿ ವಿಷಯ ಮಂಡಿಸಿದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಕರುಣಾಕರ, ಶಿಕ್ಷಣ ನೀತಿಯನ್ನು ಬದಲಾಯಿಸಲು ನಮ್ಮ ಮನಸ್ಥಿತಿಯೇ ಒಪ್ಪಿಕೊಳ್ಳದೇ ಹೋದಾಗ ಶಿಕ್ಷಣ ನೀತಿ ಪೇಪರಿನಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಅಂಕಕ್ಕೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡುವುದು ತಪ್ಪು. ಶಿಕ್ಷಣ ವ್ಯವಸ್ಥೆ ಸರಿ ಹೋಗಬೇಕೆಂದರೆ ನಾವು ಉತ್ತಮ ಶಿಕ್ಷಕರಾಗಿ ಕಾರ್ಯ ಮಾಡುತ್ತಿದ್ದೇವೆಯೆ ಎಂದು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ. ಶಿಕ್ಷಕರಿಂದ ಗುರುವಾಗಿ ಬದಲಾಗುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ವಿಚಾರ ಸಂಕಿರಣಗಳ ಕೊನೆಯಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಹುಬ್ಬಳಿಯ ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ರಘುನಂದನ ಅವರು ಶಿಕ್ಷಕರೊಂದಿಗೆ ಸಂವಹನ ನಡೆಸಿದರು. ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಹಿಸಿದ್ದರು. ಈ ಸಂದರ್ಭ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಉಪಸ್ಥಿತರಿದ್ದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಹಿರಿಯರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.