ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನು 10 ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಿಂದೆಂದೂ ನಡೆಯದಷ್ಟು ಚುನಾವಣಾ ಅಕ್ರಮಗಳು ಯುವಕಾಂಗ್ರೆಸ್ ಚುನಾವಣೆಯಲ್ಲಿ ನಡೆದಿದೆ. ರಾಜ್ಯಾಧ್ಯಕ್ಷರ ಆಯ್ಕೆಗೆ ಚಲಾವಣೆಯಾದ ಪ್ರತಿ ವೋಟ್‍ಗೆ ಅಭ್ಯರ್ಥಿಗಳು 4ರಿಂದ5 ಸಾವಿರ ರೂ. ನೀಡಿರುವ ಆರೋಪ ಕೇಳಿ ಬಂದಿದೆ.
ಆಕಾಂಕ್ಷಿಗಳು ತಮ್ಮ ಬೆಂಬಲಿಗರಿಗೆ ಹಣ ನೀಡಿ ಮತಹಾಕಿರುವ ಆಕ್ಷೇಪಗಳು ಕೇಳಿ ಬಂದಿತ್ತಾದರೂ ಅಧಿಕೃತವಾಗಿ ಯಾವುದೇ ದೂರುಗಳು ದಾಖಲಾಗಿಲ್ಲ. ನೋಂದಾಯಿತ ಮತದಾರರ ಪೈಕಿ ಶೇ.50ರಷ್ಟು ಮತದಾನ ನಡೆದಿದ್ದು, 1.92ಲಕ್ಷ ಯುವ ಮತದಾರರು ಮತ ಚಲಾಯಿಸಿದ್ದಾರೆ. ಆದರೆ, ಇವರಲ್ಲಿ ಬಹಳಷ್ಟು ಮಂದಿ ನಕಲಿ ಮತದಾನ ಮಾಡಿರುವ ಶಂಕೆಗಳು ವ್ಯಕ್ತವಾಗಿದೆ. ಹೀಗಾಗಿ ಏಕಾಏಕಿ ಫಲಿತಾಂಶವನ್ನು ಪ್ರಕಟಿಸಿದೆ ಪ್ರತಿಮತವನ್ನು ಪರಿಶೀಲನೆ ನಡೆಸಲು ಯುವ ಕಾಂಗ್ರೆಸ್‍ನ ಚುನಾವಣಾ ಆಯೋಗ ಮುಂದಾಗಿದೆ. ಯುವ ಕಾಂಗ್ರೆಸ್ ಚುನಾವಣೆಗಾಗಿಯೇ ಪಕ್ಷ ಆಂತರಿಕವಾಗಿ ಆಯೋಗವೊಂದನ್ನು ರಚನೆ ಮಾಡಿದೆ. ಹೀಗಾಗಿ ಪ್ರತಿಯೊಂದು ಮತವನ್ನು ಸಾಫ್ಟ್‍ವೇರ್ ಮೂಲಕ ಪರಿಶೀಲನೆಗೊಳಪಡಿಸಿ ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡು ನಂತರ ಮತವನ್ನು ಮಾನ್ಯ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಸುಮಾರು 8ರಿಂದ 10ಕೋಟಿ ಖರ್ಚು ಮಾಡಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದು ಮನಸೋಇಚ್ಚೆ ಮತ ಹಾಕಿಸಿದ್ದ ಆಕಾಂಕ್ಷಿಗಳ ಎದೆಯಲ್ಲಿ ಡವಡವ ಶುರುವಾಗಿದೆ.