ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ‘ಆಮ್ನಾಯಃ’ ದಿನದರ್ಶಿಕೆ ತಯಾರಿಗೆ ಚಾಲನೆ ವಿಜ್ಞಾನದ ಮೂಲಕ ಭಗವಂತನನ್ನು ಕಾಣುವುದು ಅಗತ್ಯ ; ರಾಜಶ್ರೀ ನಟ್ಟೋಜ-ಕಹಳೆ ನ್ಯೂಸ್
ಪುತ್ತೂರು: ದೇವರು ಮತ್ತು ವಿಜ್ಞಾನ ಪರಸ್ಪರ ವಿರುದ್ಧಾರ್ಥಕ ವಿಷಯವೆಂಬಂತೆ ಭಾವನೆಯಿದೆ. ಆದರೆ ವಿಜ್ಞಾನದ ಮೂಲಕ ಭಗವಂತನನ್ನು ಕಾಣಬಹುದೆಂಬ ಕಲ್ಪನೆ ಇದೀಗ ಬೆಳೆಯುತ್ತಿದೆ. ಭೌತವಿಜ್ಞಾನ ಇಂತಹ ಪ್ರಯತ್ನಕ್ಕೆ ಮಾಧ್ಯಮವಾಗಬಲ್ಲುದು. ಈ ರೀತಿಯ ಚಿಂತನೆಗಳು ಸಮಾಜದಲ್ಲಿ ಬೆಳವಣಿಗೆಯಾಗಿ ವಿಜ್ಞಾನದ ಮೂಲಕ ಭಗವಂತನನ್ನು ಕಾಣುವ ಪ್ರಯತ್ನ ಹೆಚ್ಚಾಗಬೇಕು ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹೇಳಿದರು.
ಅವರು ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿ ಮಹಾವಿದ್ಯಾಲಯಸ ತತ್ವಶಾಸ್ತ್ರ ಹಾಗೂ ಸಂಸ್ಕøತ ವಿಭಾಗಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಮ್ಮಚಗಿಯ ಶ್ರೀಮಾತಾ ಸಂಸ್ಕøತ ಮಹಾಪಾಠಶಾಲಾದ ಸಹಯೋಗದಲ್ಲಿ ಗುರುವಾರ ‘ಆಮ್ನಾಯಃ ಭಾರತೀಯ ದಿನದರ್ಶಿಕಾ, ಗಂಧವಹಸದನಮ್’ ಎಂಬ ಹೆಸರಿನ ದೇಸೀ ಕಲ್ಪನೆಯ ದಿನದರ್ಶಿಕೆಯನ್ನು ರೂಪಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಭೌತವಿಜ್ಞಾನದೊಂದಿಗೆ ತತ್ವಶಾಸ್ತ್ರ ಅಧ್ಯಯನ ಇಂದಿನ ವಿದ್ಯಾರ್ಥಿಗಳಿಗೆ ದೊರಕಬೇಕು. ಶೈಕ್ಷಣೀಕ ನೆಲೆಗಟ್ಟಿನಿಂದ ಹಾಗೂ ಭಾರತೀಯ ಕಲ್ಪನೆಯ ಹಿನ್ನೆಲೆಯಲ್ಲಿ ಇಂತಹ ಅಧ್ಯಯನಗಳು ವಿದ್ಯಾರ್ಥಿಗಳನ್ನು ದೇಸೀ ಚಿಂತನೆಯೆಡೆಗೆ ವೈಜ್ಞಾನಿಕವಾಗಿ ಒಯ್ಯಬಹುದು. ಈ ಕಾರಣದಿಂದಾಗಿಯೇ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಬಿಎ ಹಾಗೂ ಬಿಎಸ್ಸಿ ಎರಡೂ ಪದವಿಗಳ ವಿದ್ಯಾರ್ಥಿಗಳಿಗೆ ಒಂದು ಐಚ್ಚಿಕ ವಿಷಯವನ್ನಾಗಿ ಬೋಧಿಸಲಾಗುತ್ತಿದೆ. ದೇಶದಲ್ಲಿಯೇ ಇದೊಂದು ವಿನೂತನ ಹಾಗೂ ಪ್ರಥಮ ಪ್ರಯತ್ನ ಎಂದು ನುಡಿದರು. ಜಾಲಗೋಷ್ಟಿಗೆ ಚಾಲನೆ : ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಆಧುನಿಕ ವಿಜ್ಞಾನ ಹಾಗೂ ಜ್ಯೋತಿರ್ವಿಜ್ಞಾನಗಳ ಚಿಂತನೆಯಲ್ಲಿ ಭಾರತೀಯ ಕಾಲಗಣನೆ ಎಂಬ ವಿಷಯದ ಕುರಿತಾದ ಜಾಲಗೋಷ್ಟಿಗೆ ಉಮ್ಮಚಗಿಯ ಸಂಸ್ಕøತ ಮಹಾಪಾಠಶಾಲಾದ ಪ್ರಾಚಾರ್ಯೆ ವಿದುಷಿ ಶರಾವತಿ ಗಜಾನನ ಭಟ್ಟ ಚಾಲನೆ ನೀಡಿ ತತ್ವಶಾಸ್ತ್ರದ ಬೋಧನೆ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವುದು ಶುಭವಿಚಾರ ಎಂದು ಹೇಳಿದರು. ಜ್ಯೋತಿರ್ವಿಜ್ಞಾನ ಚಿಂತನೆಯಲ್ಲಿ ಕಾಲಗಣನೆಯ ವಾಸ್ತವ ಲೆಕ್ಕಾಚಾರ ಎಂಬ ವಿಷಯದ ಬಗೆಗೆ ಪ್ರಬಂಧ ಮಂಡಿಸಿದ ಕುಮಟಾದ ವೇದ ಸಂಸ್ಕøತ ಅಕಾಡೆಮಿಯ ನಿರ್ದೇಶಕ ಡಾ.ಗೋಪಾಲಕೃಷ್ಣ ಹೆಗಡೆ ಜ್ಯೋತಿಷ ಶಾಸ್ತ್ರ ಪರಿಪೂರ್ಣ ವಿಜ್ಞಾನವೇ ಆಗಿದೆ. ಗ್ರಹನಕ್ಷತ್ರಗಳ ಅಧ್ಯಯನವನ್ನು ನಡೆಸಲು ನಮ್ಮ ಬಳಿಯಿರುವ ಸಮರ್ಪಕವಾದ ಮಾಧ್ಯಮವೇ ಜ್ಯೋತಿಷ ಶಾಸ್ತ್ರ. ಸಾರ್ವಕಾಲಿಕವಾಗಿ ಅತ್ಯಂತ ಸಮರ್ಪಕವೆನಿಸುವ ಭಾರತೀಯ ಪಂಚಾಂಗ ವ್ಯವಸ್ಥೆ ಈ ಹಿನ್ನೆಲೆಯಲ್ಲೇ ಬೆಳೆದುಬಂದಿದೆ. ಸೂರ್ಯ ಸಿದ್ಧಾಂತ ಎಂಬ ಕೃತಿಯೇ ಭಾರತೀಯ ಕಾಲಗಣನೆ ಇರುವಂತಹ ಆಧಾರ ಗ್ರಂಥ ಎಂದು ನುಡಿದರು. ಜ್ಯೋತಿಷ ವ್ಯವಸ್ಥೆಯಲ್ಲಿ ಎರಡು ವಿಧಗಳಿವೆ. ಒಂದು ಪ್ರಾಚೀನ ಜ್ಯೋತಿಷ ಹಾಗೂ ಇನ್ನೊಂದು ನವೀನ ಜ್ಯೋತಿಷ. ಇವೆರಡೂ ಕೂಡ ಸೂರ್ಯಸಿದ್ಧಾಂತದ ಆಧಾರದ ಮೇಲೆಯೇ ಬೆಳೆದುಬಂದ ಜ್ಯೋತಿಷ ವ್ಯವಸ್ಥೆಯಾಗಿದೆ. ಕಾಲ ಎನ್ನುವುದು ಅನಂತ ಹಾಗೂ ಅತ್ಯಾವಶ್ಯಕ ಸಂಗತಿ. ಅಲ್ಲದೆ ನಮ್ಮ ಜೀವನಾಧಾರವಾಗಿ ಕಾಲಗಣನೆಯು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು. ವೈಶ್ಚಿಕ ವಿಜ್ಞಾನ ಚಿಂತನೆಯಲ್ಲಿ ಕಾಲಗಣನೆಯ ವಾಸ್ತವ ಲೆಕ್ಕಾಚಾರ ಎಂಬ ವಿಷಯದ ಬಗೆಗೆ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಭೌತಶಾಸ್ತ್ರ ವಿದ್ಯಾರ್ಥಿ ಆದರ್ಶ ಎಚ್. ಎ ಎರಡು ವಿಧದ ಕ್ಯಾಲೆಂಡರ್‍ಗಳನ್ನು ಗುರುತಿಸಲಾಗುತ್ತದೆ. ಸೂರ್ಯನ ಅಯನಗಳನ್ನು ಆಧಾರವಾಗಿರಿಸಿರುವ ಟ್ರಾಫಿಕಲ್ ಕ್ಯಾಲೆಂಡರ್ ಹಾಗೂ ಸೂರ್ಯ ಅಥವ ಚಂದ್ರರ ಹಿನ್ನೆಲೆಯ ನಕ್ಷತ್ರಗಳು ಆಧಾರವಾಗಿರುವ ಸೈಡೆರಿಯಲ್ ಕ್ಯಾಲೆಂಡರ್. ಪ್ರಸ್ತುತ ಇರುವ ಗ್ರೆಗೋರಿಯನ್ ಕ್ಯಾಲೆಂಡರ್ ಟ್ರಾಫಿಕಲ್ ಆಗಿದೆ. ಆದರೆ ಇದರಲ್ಲಿ ತಿಂಗಳುಗಳನ್ನು ಗುರುತಿಸಲು ಯಾವುದೇ ಖಗೋಳದ ವಿದ್ಯಮಾನಗಳ ಆಧಾರವಿಲ್ಲ ಎಂದರಲ್ಲದೆ ಭಾರತೀಯ ಪಂಚಾಂಗಗಳು ಸೈಡೆರಿಯಲ್ ಆಗಿದ್ದು ಪ್ರತಿಯೊಂದು ಕಾಲಮಾನಕ್ಕೂ ಖಗೋಳ ವಿದ್ಯಮಾನಗಳ ಸಂಬಂಧವಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ ಮಾತನಾಡಿ ಹಿಂದೂ ಧರ್ಮದ ಪ್ರತಿಯೊಂದು ಆಚರಣೆ, ಹಬ್ಬ ಹರಿದಿನಗಳು, ಮದುವೆ ಮುಂಜಿಗಳು ಹೀಗೆ ಎಲ್ಲವೂ ಪಂಚಾಂಗ, ಗಳಿಗೆ, ನಕ್ಷತ್ರಗಳ ಆಧಾರದಲ್ಲೇ ನಡೆಯುತ್ತವೆ. ಆದರೆ ಕ್ಯಾಲೆಂಡರ್ ವ್ಯವಸ್ಥೆಯಲ್ಲಿ ಮಾತ್ರ ಇಂಗ್ಲಿಷ್ ವ್ಯವಸ್ಥೆಯನ್ನೇ ಅನುಸರಿಸುತ್ತಿದ್ದೇವೆ. ಹಾಗಾಗಿ ನಮ್ಮದೇ ಆದ ಪಂಚಾಂಗ ಆಧಾರಿತ ಕ್ಯಾಲೆಂಡರ್ ವ್ಯವಸ್ಥೆಯ ಅವಶ್ಯಕತೆಯಿದೆ. ಹಾಗಾದಾಗ ನಮ್ಮ ಧಾರ್ಮಿಕ ಚಟುವಟಿಕೆಗಳ ನಿರ್ಣಯಕ್ಕೆ ಸಹಕಾರಿಯೆನಿಸುತ್ತದೆ. ಮುಂದಿನ ಯುಗಾದಿಯ ಶುಭಸಂದರ್ಭದಲ್ಲಿ ಹೊಸವರ್ಷದ ಆಚರಣೆಯೊಂದಿಗೆ ಹೊಸ ದಿನದರ್ಶಿಕೆಯನ್ನು ಬಿಡುಗಡೆಗೊಳಿಸುವ ವಿಶ್ವಾಸವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಎಸ್.ವ್ಯಾಸ ಸಂಸ್ಥೆಯ ವಿಶ್ರಾಂತ ಡೀನ್ ಡಾ.ಜಿ.ಎನ್.ಭಟ್ ಹರಿಗಾರು ಮಾತನಾಡಿ ಪ್ರಾಚೀನ ಕಾಲದ ಪಂಚಾಂಗವನ್ನು ವೈಜ್ಞಾನಿಕವಾಗಿ ಪ್ರಸ್ತುತಪಡಿಸಲು ನಮ್ಮ ಜನರು ಹಿಂದುಳಿದಿದ್ದಾರೆ. ಸೂರ್ಯನನ್ನು ನಾರಾಯಣನೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಅಂತಹ ಮಹತ್ವ ಸೂರ್ಯನಿಗಿದೆ. ಖಗೋಳ ಶಾಸ್ತ್ರ ಹಾಗೂ ಧರ್ಮಶಾಸ್ತ್ರವು ಸಮನ್ವಯವಾಗಿ ನಡೆಯಬೇಕು. ಪಂಚಾಂಗದಂತಹ ವಿಷಯಗಳು ಆಧುನಿಕ ತಲೆಮಾರಿನ ವಿದ್ಯಾರ್ಥಿಗಳಿಗೆ ತಿಳಿಸಬೇಕಾದ ಅಗತ್ಯ ಹಿರಿಯರಿಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರಾದ ಶ್ರೀಕಲಾ, ಪ್ರಿಯಾ ಹಾಗೂ ಸಮೀಕ್ಷಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸಿಂಚನ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು. ವಿದ್ಯಾರ್ಥಿನಿ ನಿಶ್ಚಿತಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಪ್ರಕೃತಿ ಹಾಗೂ ಸಾಯಿಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು.