ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ವಸತಿ ನಿಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮೂಡುಬಿದಿರೆಯ ದಕ್ಷ, ಪ್ರಾಮಾಣಿಕ ಪೋಲಿಸ್ ವೃತ್ತ ನಿರೀಕ್ಷಕರಾದ ಶ್ರಿ ದಿನೇಶ್ ಕುಮಾರ್ ರವರು ಸಂಕ್ರಾಂತಿ ಹಬ್ಬವನ್ನು ಉದ್ಘಾಟಿಸಿ ‘ಸಂಕ್ರಾಂತಿಯು ಪರಿವರ್ತನೆಯ ಕಾಲವಾಗಿದೆ.
ನಾವೂ ಕೂಡ ನಮ್ಮೊಳಗಿನ ನಕಾರಾತ್ಮಕತೆಯನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡು ಬದಲಾದ ಕಾಲಘಟ್ಟದಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಚಿಂತಿಸಬೇಕಾಗಿದೆ. ಮನುಷ್ಯನಲ್ಲಿರುವ ಸುಪ್ತ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡು ಉತ್ತಮ ಮಾರ್ಗದರ್ಶನ ಪಡೆಯುತ್ತಾ ಜೀವನದಲ್ಲಿ ಯಶಸ್ಸು ಪಡೆಯುವುದು ಸಾಧ್ಯ’ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ದಿನೇಶ್ ಕುಮಾರ್ ರವರ ಕಾರ್ಯದಕ್ಷತೆ ಮತ್ತು ಕೋವಿಡ್-19 ಸಮಯದಲ್ಲಿನ ಸಮರ್ಥ ಕರ್ತವ್ಯ ನಿರ್ವಹಣೆಗಾಗಿ ಎಕ್ಸಲೆಂಟ್ ಸಮೂಹ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ರವರು ಅಧ್ಯಕ್ಷತೆಯನ್ನು ವಹಿಸಿ ‘ದೇಶದ ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುವ ಉತ್ತರಾಯಣ ಪುಣ್ಯ ಕಾಲವಾದ ಸಂಕ್ರಾಂತಿ ಹಬ್ಬವು ಎಲ್ಲರಿಗೂ ಶುಭ ತರಲಿ’ ಎಂದು ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿಯವರು ಮತ್ತು ಹಳೆಯ ವಿದ್ಯಾರ್ಥಿನಿ ಗಾಯಕಿ ಕು| ರಂಜಿತಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕøತ ಉಪನ್ಯಾಸಕ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಸೋನಿ ಚಾನೆಲ್ ನ ಇಂಡಿಯನ್ ಐಡಲ್ ಗೆ ಆಯ್ಕೆಯಾಗಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಕು| ರಂಜಿತಾ ಹೆಗಡೆ ಮತ್ತು ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಕ್ರಾಂತಿ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು.