ಲಕ್ನೋ : ಗಿಡ ನೆಡುವ ಅಭಿಯಾನ ಹಾಗೂ ರಾಷ್ಟ್ರ ಧ್ವಜಾರೋಹಣದೊಂದಿಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಗಣರಾಜ್ಯೋತ್ಸವದಂದು ಚಾಲನೆ ನೀಡಲಾಗುತ್ತಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸುಪ್ರೀಂಕೋರ್ಟ್‍ನ ಐತಿಹಾಸಿಕ ತೀರ್ಪಿನ ಅನ್ವಯ ಜಿಲ್ಲೆಯಲ್ಲೇ ಮಸೀದಿ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಸೂಚಿಸಿದ ಕಾರಣದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ದೇಗುಲು ನಿರ್ಮಾಣವಾಗುವ ಸ್ಥಳದಿಂದ 25 ಕಿಲೋ ಮೀಟರ್ ದೂರದಲ್ಲಿ ಮಂಜೂರು ಮಾಡಲಾಗಿರುವ ಐದು ಎಕರೆ ಜಮೀನಿನಲ್ಲಿ ಭವ್ಯ ಮಸೀದಿ ನಿರ್ಮಾಣದ ಕಾರ್ಯವನ್ನು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಆರಂಭಿಸಲಿದೆ. ಐಐಸಿಎಫ್ ಜನವರಿ 26ರಂದು ಬೆಳಗ್ಗೆ 8:30ಕ್ಕೆ ನಿರ್ಮಾಣ ಕಾರ್ಯವನ್ನು ವಿದ್ಯುಕ್ತವಾಗಿ ಆರಂಭಿಸಲಾಗುವುದು ಎಂದು ತಿಳಿಸಿದೆ. ರವಿವಾರ ನಡೆದ ಟ್ರಸ್ಟ್ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಪಡಿಸಲಾಗಿದ್ದು, ವಿದೇಶಿ ದೇಣಿಗೆ ಸ್ವೀಕರಿಸಲು ಆದಾಯ ತೆರಿಗೆ ಇಲಾಖೆಯಿಂದ ಅಗತ್ಯ ಕ್ಲಿಯರೆನ್ಸ್ ಸಿಗಲು ಆಗುತ್ತಿರುವ ವಿಳಂಬದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ರೂಪಿಸಿರುವ ಯೋಜನೆಯಂತೆ, ಹವಾಮಾನ ಬದಲಾವಣೆಯಿಂದ ಮನುಕುಲಕ್ಕೆ ಆಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಹಸಿರು ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತದೆ ಮತ್ತು ಇಲ್ಲಿ ಅಮೆಝಾನ್ ಮಳೆ ಕಾಡುಗಳಿಂದ ಹಿಡಿದು ಆಸ್ಟ್ರೇಲಿಯಾದ ಕುರುಚಲು ಗಿಡಗಳ ವರೆಗೆ ವಿಶ್ವದ ಎಲ್ಲೆಡೆಗಳಿಂದ ಸಸ್ಯಗಳನ್ನು ತಂದು ಬೆಳೆಸಲಾಗುತ್ತದೆ ಮತ್ತು ಈ ಭಾಗದ ಸಮುದಾಯಕ್ಕೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಹಾಗೂ ಹವಾಮಾನ ಬದಲಾವಣೆಯ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಐಐಸಿಎಫ್ ಪ್ರಕಟನೆ ಹೇಳಿದ್ದು, ಹಾಗೆ ಆಸ್ಪತ್ರೆ, ಮ್ಯೂಸಿಯಂ, ಗ್ರಂಥಾಲಯ, ಸಮುದಾಯ ಪಾಕಶಾಲೆ, ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರ, ಪ್ರಕಾಶನ ಸಂಸ್ಥೆ ಸೇರಿದಂತೆ ಮಸೀದಿ ಸಂಕೀರ್ಣ ನಿರ್ಮಾಣ ಯೋಜನೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಅಯೋಧ್ಯೆ ಜಿಲ್ಲಾ ಮಂಡಳಿ ಇದಕ್ಕೆ ಅನುಮತಿ ನೀಡಿದ್ದು, ಮಣ್ಣು ಪರೀಕ್ಷಾ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದೆ.