Monday, January 20, 2025
ಪುತ್ತೂರು

ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ, ವಿದ್ಯೆ ಎನ್ನುವುದು ಸಂಸ್ಕಾರ, ದೇಶಪ್ರೇಮವನ್ನು ತುಂಬುವ ಮಾಧ್ಯಮವಾಗಬೇಕು; ಕಾಂಚನ ಈಶ್ವರ ಭಟ್-ಕಹಳೆ ನ್ಯೂಸ್

ಪುತ್ತೂರು: ವಿದ್ಯೆ ಎನ್ನುವುದು ಸಂಸ್ಕಾರ, ದೇಶಪ್ರೇಮವನ್ನು ತುಂಬುವ ಮಾಧ್ಯಮವಾಗಬೇಕು. ಇಂದು ವೈದ್ಯಕೀಯ ಶಾಸ್ತ್ರ, ಇಂಜಿನಿಯರಿಂಗ್ ನಂತಹ ಶಿಕ್ಷಣ ಪಡೆದವರೇ ಬಾಂಬ್ ಸಿಡಿಸುವಂತಹ ಘಟನೆಗಳನ್ನು ಕಾಣುತ್ತಿದ್ದೇವೆ. ಹಾಗಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಏನನ್ನು ಕಲಿಸುತ್ತಿದೆ ಎಂಬ ಆತಂಕ ಮೂಡುತ್ತಿದೆ. ಆದ್ದರಿಂದ ಅತ್ಯುತ್ತಮ ಗುಣಮಟ್ಟದ ನಾಗರಿಕರನ್ನು ತಯಾರಿಸುವ ಕಾರ್ಯವನ್ನು ಶಿಕ್ಷಣ ಮಾಡಬೇಕು ಎಂದು ಸಂಗೀತ ಗುರು ವಿದ್ವಾನ್ ಕಾಂಚನ ಈಶ್ವರ ಭಟ್ ಹೇಳಿದರು.


ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಬಾಲವಾಡಿಗಳಿಂದ ತೊಡಗಿ ಉನ್ನತ ಶಿಕ್ಷಣ ವ್ಯವಸ್ಥೆಯವರೆಗೆ ಸರಿಸುಮಾರು ಹದಿನೇಳು ವರ್ಷಗಳ ಕಾಲ ನಾವು ವಿದ್ಯಾರ್ಥಿಗಳಿಗೆ ನಿರಂತರವಾಗಿ ವಿದ್ಯೆ ಕಲಿಸುತ್ತೇವೆ. ಆದರೆ ಅಷ್ಟಾಗಿಯೂ ಸಂಸ್ಕಾರವಂತ ಮಂದಿಯ ರೂಪಿಸುವಿಕೆಯಲ್ಲಿ ಎಡವುತ್ತಿದ್ದೇವೆ ಎಂದರೆ ಅದು ಗಂಭೀರವಾಗಿ ಆಲೋಚಿಸಬೇಕಾದ ವಿಚಾರ. ನಮ್ಮತನ, ನಮ್ಮ ಔನ್ನತ್ಯಕ್ಕೆ ಪೂರಕವಾದ ಶಿಕ್ಷಣವನ್ನು ಜಾರಿಗೊಳಿಸಬೇಕಿದೆ. ಹಾಗಾದಾಗ ಮಾತ್ರ ಸುಸಂಸ್ಕøತ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ನುಡಿದರು. ಸಾಮಾನ್ಯವಾಗಿ ವಿದ್ಯಾರ್ಥಿಗಳು ರಜೆಗಾಗಿ ಹಾತೊರೆಯುವುದಿದೆ. ಆದರೆ ಶಿಕ್ಷಣ ಅನ್ನುವುದು ರಜೆಯನ್ನು ಮೀರಿದ ಸಂಗತಿ. ಒಂದು ದಿನದ ರಜೆ ಎರಡು ದಿನಗಳಷ್ಟು ನಮ್ಮನ್ನು ಹಿಂದಕ್ಕೆ ತಳ್ಳುತ್ತದೆ. ಆದ್ದರಿಂದ ಶಿಕ್ಷಣದ ಸಂದರ್ಭದಲ್ಲಿ ರಜೆ ಇಲ್ಲ ಎಂಬ ಕಲ್ಪನೆಯನ್ನು ಒಡಮೂಡಿಸಿಕೊಳ್ಳಬೇಕಿದೆ. ಶಿಕ್ಷಣ ನಿರಂತರತೆಯನ್ನು ಕಾಯ್ದುಕೊಂಡಾಗ ಮಾತ್ರ ಅದು ಅರ್ಥವತ್ತೆನಿಸುತ್ತದೆ ಎಂದರಲ್ಲದೆ ಗುರುಹಿರಿಯರನ್ನು ಗೌರವಿಸುವ, ತನ್ಮೂಲಕ ಹೊಸತನ್ನು ಕಲಿಯುವ ಮನಃಸ್ಥಿತಿ ಒಡಮೂಡಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ಶಿಕ್ಷಣ ವ್ಯಕ್ತಿತ್ವದ ರೂಪಿಸುವಿಕೆಯ ಭಾಗವಾಗಬೇಕು. ಸತ್ಪ್ರಜೆಗಳ ರೂಪಿಸುವಿಕೆಗೆ ನಾಂದಿಯಾಗಬೇಕು. ಭಾರತೀಯ ಪರಂಪರೆಯ ಶುದ್ಧ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಬೇಕಾದದ್ದು ಇಂದಿನ ತುರ್ತು. ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಿಂದ ತೊಡಗಿ ವಿದ್ಯಾರ್ಥಿಗಳವರೆಗೆ ಪ್ರತಿಯೊಬ್ಬರಿಗೂ ಬಹುದೊಡ್ಡ ಜವಾಬ್ಧಾರಿಯಿದೆ. ಇದನ್ನು ಅರಿತುಕೊಂಡು ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಮಗಿಂದು ದೇಶಭಕ್ತರು ಬೇಕಾಗಿದ್ದಾರೆ. ವಿದೇಶೀ ಸಂಸ್ಕøತಿಯೊಳಗೆ ಮುಳುಗುತ್ತಿರುವ ನಮ್ಮ ದೇಶವನ್ನು ಸ್ವದೇಶೀ ಸಂಸ್ಕøತಿಯ ಬಲದಿಂದ ಮೇಲೆಬ್ಬಿಸಬೇಕಿದೆ. ಒಂದು ರೀತಿಯಲ್ಲಿ ವಿದೇಶೀ ಪ್ರವಾಹದ ವಿರುದ್ಧ ಈಜಿ ಗೆಲುವು ಸಾಧಿಸಬೇಕಿದೆ. ಹೀಗೆ ಸ್ವದೇಶೀ ಮಂತ್ರದೊಂದಿಗೆ ಜಾಗೃತಿ ಮೂಡಿಸುವ ಪ್ರತಿಯೊಬ್ಬರೂ ಈ ದೇಶದೊಳಗಿನ ಯೋಧರು ಎಂಬುದನ್ನು ಮರೆಯಬಾರದು. ದೇಶೀಯವಾದ ಆಚಾರ ವಿಚಾರ ಸಂಸ್ಕøತಿಗಳನ್ನು ಪುನರ್ ಪ್ರತಿಷ್ಟಾಪಿಸುವುದೇ ಅಂಬಿಕಾ ಸಂಸ್ಥೆಗಳ ಧ್ಯೇಯ ಎಂದು ಹೇಳಿದರು. ಇಂದು ನಕಾರಾತ್ಮಕ ಸಂಗತಿಗಳು ಬಹುಬೇಗನೆ ಜನಾಕರ್ಷಣೆ ಗಳಿಸುತ್ತಿವೆ. ಯಾವುದೋ ಅಸಂಬದ್ಧ ಸಾಹಿತ್ಯದ ಹಾಡುಗಳು ದೇಶಾದ್ಯಂತ ಸದ್ದು ಮಾಡುತ್ತಿವೆ. ಆದರೆ ದೇಶದ ಸ್ವಾತಂತ್ರ್ಯಕ್ಕೆ ಬೀಜಮಂತ್ರವಾದ ವಂದೇ ಮಾತರಂನಂತಹ ಹಾಡು ಇಂದಿನ ತಲೆಮಾರಿಗೆ ತಿಳಿದಿಲ್ಲ. ಇದು ನಮ್ಮ ದೇಶದ ದುರಂತ. ನಾವಿದನ್ನು ಮೀರಿ ನಮ್ಮ ಸನಾತನ ಶ್ರೇಷ್ಟತೆಯನ್ನು ಉಳಿಸುವ ಮತ್ತು ಬೆಳೆಸುವ ನಾಯಕರಾಗಬೇಕು ಎಂದರು. ಈ ಸಂದರ್ಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆರತಿ ಬೆಳಗಿ, ತಿಲಕವನ್ನಿಡುವ ಮೂಲಕ ದೇಸೀ ಸಂಸ್ಕøತಿಯಂತೆ ಸ್ವಾಗತಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಂದ ವಂದೇಮಾತರಂ ಪ್ರಾರ್ಥನೆ ನಡೆಯಿತು. ವಿದ್ಯಾರ್ಥಿ ಕಾರ್ತಿಕ್ ಕೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಾಯಿಶ್ವೇತ ವಂದಿಸಿ, ವೈಷ್ಣವಿ ಜೆ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು