ಹೆಡ್ ಕಾನ್ಸ್‌ಟೇಬಲ್ ಗಣೇಶ್ ಕಾಮತ್‌ಗೆ ತಲವಾರಿನಿಂದ ದಾಳಿ ನಡೆಸಿ ಮಂಗಳೂರು ಗೋಲಿಬಾರ್ ಪ್ರತೀಕಾರಕ್ಕೆ ಸ್ಕೆಚ್ ಹಾಕಿದ್ದ 6 ಆರೋಪಿಗಳು ಅರೆಸ್ಟ್ ; ಆರೋಪಿ ಪಟಿಂಗ ನವಾಝ್ ಆಂಡ್ ಟೀಂ ಹಿಂದೆ ಜಿಹಾದಿ ಉಗ್ರ ಸಂಘಟನೆಯ ಕರಿನೆರಳು..! – ಕಹಳೆ ನ್ಯೂಸ್
ಮಂಗಳೂರು, ಜ.19 : ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಓರ್ವರಿಗೆ ಕಳೆದ ಡಿಸೆಂಬರ್ 14 ರಂದು ಹಾಡುಹಗಲಲ್ಲೇ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನ ಮಾಡಿದ್ದ ಘಟನೆಯು ಮಂಗಳೂರು ಗೋಲಿಬಾರ್ ರಿವೇಂಜ್ ಎಂಬ ಮಾಹಿತಿ ದೊರೆತಿದ್ದು ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ.
ಮಂಗಳೂರಿನ ಬಂದರು ಠಾಣಾ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಗಣೇಶ್ ಕಾಮತ್ ಹಾಗೂ ಮಹಿಳಾ ಸಿಬ್ಬಂದಿಯೋರ್ವರು ನಗರದ ನ್ಯೂಚಿತ್ರ ಸರ್ಕಲ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಓರ್ವ ಬೈಕ್‌ನಿಂದ ಇಳಿದು ಪೊಲೀಸರು ಕುಳಿತುಕೊಂಡಲ್ಲಿಗೆ ಹೋಗಿ ಗಣೇಶ್ ಕಾಮತ್‌ಗೆ ತಲವಾರಿನಿಂದ ದಾಳಿ ನಡೆಸಿ ಬೈಕ್ ಏರಿ ಪರಾರಿಯಾಗಿದ್ದರು.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು.
ಗೊಲೀಬಾರ್‌ನಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನದ ಹಿನ್ನೆಲೆ ಪೊಲೀಸರ ಮೇಲೆ ಕೊಲೆ ಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ. 16 ವರ್ಷದ ಬಾಲಕ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಮಹಮ್ಮದ್ ನವಾಝ್, ಅನೀಶ್ ಅಶ್ರಫ್, ಅಬ್ದುಲ್ ಖಾದರ್ ಫಹಾದ್, ಶೇಖ್ ಮಹಮ್ಮದ್ ಹ್ಯಾರಿಸ್, ರಾಹಿಲ್ ಯಾನೆ ಚೋಟು ರಾಹಿಲ್, ಮಹಮ್ಮದ್ ಖಾಯೀಸ್ ಬಂಧಿತರು. ಇನ್ನಿಬ್ಬರನ್ನು ಇದಕ್ಕೂ ಮುನ್ನ ಬಂಧಿಸಲಾಗಿದೆ.
ಕೃತ್ಯದ ಹಿಂದೆ ‘ ಮಾಯ ಗ್ಯಾಂಗ್ ‘ ಮತ್ತು ಇನ್ನೊಂದು ಗ್ಯಾಂಗ್ ಭಾಗಿಯಾಗಿದ್ದು ನೈಟ್ರೋವಿಟ್ ಟ್ಯಾಬ್ಲೆಟ್ ಬಳಸಿ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.