Sunday, January 19, 2025
ರಾಜಕೀಯ

ಗೋವುಗಳ ಬಗ್ಗೆ ಬಿಜೆಪಿಯವರಿಗೆ ನಿಜವಾದ ಕಾಳಜಿ ಇದ್ದರೆ ಮೊದಲು ಗೋಮಾಂಸ ರಫ್ತನ್ನು ನಿಷೇಧಿಸಲಿ ರಾಮಲಿಂಗಾರೆಡ್ಡಿ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿರುವುದು ಚುನಾವಣಾ ಗಿಮಿಕ್ ಎಂದು ಹರಿಹಾಯ್ದಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ಗೋವುಗಳ ಬಗ್ಗೆ ಬಿಜೆಪಿಯವರಿಗೆ ನಿಜವಾದ ಕಾಳಜಿ ಇದ್ದರೆ ಮೊದಲು ಗೋಮಾಂಸ ರಫ್ತನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು.

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತ ಗೋಮಾಂಸ ರಫ್ತಿನಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದೆ. ಗೋಮಾಂಸ ರಫ್ತಿನಿಂದ ಸುಮಾರು 26 ಸಾವಿರ ಕೋಟಿ ರೂ. ಆದಾಯ ಬಂದಿದೆ ಎಂದ ಅವರು, ಬಿಜೆಪಿಯವರಿಗೆ ಗೋವುಗಳ ಬಗ್ಗೆ ಪ್ರೀತಿ ಕಾಳಜಿ ಇದ್ದರೆ ಗೋಮಾಂಸ ರಫ್ತು ನಿಷೇಧಿಸಲಿ. ಇದರಿಂದ ಶೇ. 75 ರಷ್ಟು ಗೋವುಗಳ ವಧೆಯನ್ನು ತಡೆಯಬಹುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಯವರು, ಮಹಾರಾಷ್ಟ್ರ, ಉತ್ತರಪ್ರದೇಶ ಈಶಾನ್ಯ ರಾಜ್ಯ ಸೇರಿದಂತೆ ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೋಮಾಂಸ ರಫ್ತಿನಲ್ಲಿ ವ್ಯವಹಾರ ನಡೆಸುತ್ತಿರುವವರು ಬಿಜೆಪಿಯವರೇ. ಬಿಜೆಪಿ ಮುಖಂಡರ ಮಾಲೀಕತ್ವದ ಕಂಪೆನಿಗಳೇ ಗೋಮಾಂಸ ರಫ್ತಿನ ಸಂಸ್ಕರಣೆಯಲ್ಲಿ ತೊಡಗಿವೆ ಎಂದು ಅವರು ಆರೋಪಿಸಿದರು.

ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲೇ ಹೆಚ್ಚಿನ ಗೋಮಾಂಸ ಸಂಸ್ಕರಣಾ ಘಟಕಗಳಿವೆ. ಇವೆಲ್ಲಾ ಬಿಜೆಪಿಯ ಮುಖಂಡರದ್ದೇ. ಗೋವಾದಲ್ಲೂ ಬಿಜೆಪಿ ಆಡಳಿತವಿದೆ. ಅಲ್ಲೂ 50 ಟನ್ ಗೋಮಾಂಸ ಬಳಕೆಯಾಗುತ್ತಿದೆ ಎಂದರು.ವಸ್ತುಸ್ಥಿತಿ ಹೀಗಿದ್ದರೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗೋಹತ್ಯೆ ಬಗ್ಗೆ ಮಾತನಾಡುವುದು ಸರಿಯಲ್ಲ. ಇದು ಕೇವಲ ಚುನಾವಣೆ ಗಿಮಿಕ್ ಎಂದು ಹರಿಹಾಯ್ದರು.

ಚಕಾರ ಎತ್ತುತ್ತಿಲ್ಲ :

ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಕೊಲೆಯಾಗಿರುವ 22 ಜನರ ಬಗ್ಗೆ ಚಕಾರ ಏಕೆ ಎತ್ತುತ್ತಿಲ್ಲ. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಜೀವಕ್ಕೆ ಬೆಲೆಯೇ, ಬೇರೆ ಜೀವಕ್ಕೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ರಾಜ್ಯದಲ್ಲಿ 22 ಜನರ ಹತ್ಯೆಯಾಗಿದೆ ಎಂದು ಕಿಡಿಕಾರಿದರು.

ಯಾರದೇ ಹತ್ಯೆಯಾಗಲಿ ಅದು ಸರಿಯಲ್ಲ. ಹತ್ಯೆಗೆ ಕಾರಣರಾದವನ್ನು ಬಂಧಿಸಿ ಜೈಲಿಗಟ್ಟುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಹೀಗಿದ್ದರೂ ಅಮಿತ್ ಶಾ, ಕೊಲೆಗಾರರನ್ನು ಪಾತಾಳದಲ್ಲಿದ್ದರೂ ಹುಡುಕಿ ಜೈಲಗಟ್ಟುತ್ತೇವೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದರು.
ಬಿಜೆಪಿಯವರು ಹೇಳುವಂತೆ ಎಸ್‌ಟಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತರಿಂದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಹತ್ಯೆಯಾಗಿರುವುದು ಹತ್ತು ಪ್ರಕರಣಗಳು ಮಾತ್ರ ಉಳಿದೆಲ್ಲಾ ಬೇರೆ ಬೇರೆ ಕಾರಣಗಳಿಗೆ ಎಂದು ಅವರು ಹೇಳಿದರು.

ಬಿಜೆಪಿಯವರು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜವನ್ನು ಕೆಡಿಸುವ ಕೆಲಸ ಬಿಡಬೇಕು. ಧೈರ್ಯವಿದ್ದರೆ ನೇರವಾಗಿ ಚುನಾವಣೆ ಎದುರಿಸಲಿ ಎಂದು ಅವರು ಸವಾಲು ಹಾಕಿದರು.
ಈ ಹಿಂದೆ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಯಾವುದೇ ಮಠಗಳಿಗೆ ಹೋಗಿರಲಿಲ್ಲ, ರಾಜಮನೆತನದವರನ್ನು ಭೇಟಿ ಮಾಡಿರಲಿಲ್ಲ. ಈಗ ಮಠಗಳಿಗೆ ಭೇಟಿ ನೀಡುತ್ತಿರುವುದು ಚುನಾವಣಾ ತಂತ್ರಗಾರಿಕೆ ಅಷ್ಟೆ. ಅವರಿಗೆ ಮಠಗಳ ಬಗ್ಗೆ ಗೌರವವಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.

ಗೋವುಗಳು ಸೇರಿದಂತೆ ಎಲ್ಲ ಪ್ರಾಣಿಗಳ ಹತ್ಯೆ ನಿಷೇಧಕ್ಕೆ ತಮ್ಮ ವೈಯುಕ್ತಿಕ ಬೆಂಬಲ ಇದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಕಾಂಗ್ರೆಸ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧದ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವು ಏನೇ ಇರಲಿ, ನನ್ನ ವೈಯುಕ್ತಿಕ ಅಭಿಪ್ರಾಯದಂತೆ ಗೋಹತ್ಯೆ ಸೇರಿದಂತೆ ಎಲ್ಲ ಪ್ರಾಣಿಗಳ ಹತ್ಯೆಯೂ ನಿಲ್ಲಬೇಕು ಎಂದರು.

ಜಗತ್ತಿನ 14 ಲಕ್ಷ ಜೀವರಾಶಿಗಳನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಹಾಗಾಗಿ ಎಲ್ಲ ಪ್ರಾಣಿಗಳ ಸಂಪೂರ್ಣ ವಧೆಯನ್ನು ನಿಲ್ಲಿಸುವುದಕ್ಕೆ ನನ್ನ ಬೆಂಬಲ ಇದೆ ಎಂದು ಅವರು ಹೇಳಿದರು.ಗೋಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಿಲುವಿಗೂ, ನಿಮ್ಮ ನಿಲುವಿಗೂ ವ್ಯತ್ಯಾಸ ಇದೆಯಲ್ಲಾ ಎಂಬ ಪ್ರಶ್ನೆಗೆ ವೈಯುಕ್ತಿವಾಗಿ ಪ್ರಾಣಿ ವಧೆ ನಿಷೇಧಕ್ಕೆ ಸಹಮತ ಇದೆ ಎಂದು ಅವರು ಪುನರುಚ್ಛರಿಸಿದರು