Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥ್ ಪೆರೇಡ್ ನಲ್ಲಿ ಪುತ್ತೂರಿನ ಕುವರಿ; ಫಿಲೋಮಿನಾ ಕಾಲೇಜಿಗಿದು ಮತ್ತೊಂದು ಗರಿಮೆ- ಕಹಳೆ ನ್ಯೂಸ್

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್‌ನ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ ಜ.೨೬ ರಂದು ನವದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ಕಾಲೇಜ್‌ನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ಆಗಿರುವ ರಕ್ಷಾ ಅಂಚನ್‌ರವರು ಆಯ್ಕೆಯಾಗಿರುತ್ತಾರೆ.

ಕಳೆದ ನಾಲ್ಕು ವರ್ಷಗಳಿಂದ ಫಿಲೋಮಿನಾ ಕಾಲೇಜಿನಿಂದ ಆರು ಮಂದಿ ಕೆಡೆಟ್‌ಗಳು ಅಲ್ಲದೆ ಎನ್‌ಸಿಸಿ ಅಧಿಕಾರಿ ಸೇರಿದಂತೆ ಏಳು ಮಂದಿ ಪ್ರತಿಷ್ಠಿತ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸುವ ಅವಕಾಶ ಲಭಿಸಿರುತ್ತದೆ. ೨೦೧೭-೧೮ರಲ್ಲಿ ಬ್ರ್ಯಾಂಡನ್ ಹಾಗೂ ರಚನಾ, ೨೦೧೮-೧೯ರಲ್ಲಿ ಜೊವಿನ್ ಜೋಸೆಫ್, ೨೦೧೯-೨೦ರಲ್ಲಿ ಚೇತನ್ ಹಾಗೂ ಮಹಾಲಸಾ ಪೈ, ಪ್ರಸ್ತುತ ವರ್ಷ ೨೦೨೦-೨೧ನೇ ಸಾಲಿನಲ್ಲಿ ರಕ್ಷಾ ಅಂಚನ್‌ರವರು ಆಯ್ಕೆಯಾಗಿರುತ್ತಾರೆ ಜೊತೆಗೆ ಕಳೆದ ವರ್ಷ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರು ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಕಂಟಿಂಜೆಂಟ್ ಅಧಿಕಾರಿಯಾಗಿ ಪೆರೇಡ್‌ನಲ್ಲಿ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ ಜಿಲ್ಲೆಯಿಂದ ಏಕಮಾತ್ರ ವಿದ್ಯಾರ್ಥಿನಿ:
ಭಾರತದಲ್ಲಿ ಒಟ್ಟು ೧೭ ಡೈರೆಕ್ಟರೇಟ್ ಎನ್.ಸಿ.ಸಿ ಘಟಕಗಳಿದ್ದು ಅದರಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಒಂದು. ವಿವಿಧ ಭಾಗಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹತ್ತು ಮಂದಿಯಲ್ಲಿ ಮಂಗಳೂರು ಗ್ರೂಪಿನ `೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ’ಯಲ್ಲಿ ರಕ್ಷಾ ಅಂಚನ್ ಓರ್ವರಾಗಿದ್ದಾರೆ. ಪ್ರತೀ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನಿಂದ ೧೧೧ ಕೆಡೆಟ್‌ಗಳು ನವದೆಹಲಿಯಲ್ಲಿ ನಡೆಯುವ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದರು. ಆದರೆ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ೨೬ ಕೆಡೆಟ್‌ಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಲಭಿಸಿರುತ್ತದೆ. ೨೬ ಕೆಡೆಟ್‌ಗಳಲ್ಲಿ ೧೬ ಮಂದಿ ಹುಡುಗರು ಹಾಗೂ ೧೦ ಮಂದಿ ಹುಡುಗಿಯರು ಭಾಗವಹಿಸುವ ಅವಕಾಶವನ್ನು ಪಡೆದಿದ್ದು, ಹುಡುಗಿಯರ ವಿಭಾಗದಿಂದ ರಕ್ಷಾ ಅಂಚನ್‌ರವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸುವ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ. ಕಳೆದ ವರ್ಷ ಮಡಿಕೇರಿ ಕುಶಾಲನಗರದಲ್ಲಿ ನಡೆದ ಎನ್‌ಸಿಸಿ ವಾರ್ಷಿಕ ತರಬೇತಿ ಶಿಬಿರದಲ್ಲಿ `ಬೆಸ್ಟ್ ಫೈರಿಂಗ್’ ಕೆಡೆಟ್ ಪ್ರಶಸ್ತಿಗೆ ರಕ್ಷಾ ಅಂಚನ್‌ರವರು ಭಾಜನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ತಂಡದ ನಾಯಕಿಯಾಗಿ ರಕ್ಷಾ ಅಂಚನ್‌ರವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದ್ದು, ಜ.೨೮ ರಂದು ನಡೆಯುವ ಪ್ರಧಾನ ಮಂತ್ರಿ ರ್‍ಯಾಲಿಯಲ್ಲಿ ಭಾಗವಹಿಸುವ ಅವಕಾಶವನ್ನು ಕೂಡ ರಕ್ಷಾ ಅಂಚನ್‌ರವರು ಪಡೆದುಕೊಂಡಿದ್ದಾರೆ. ರಕ್ಷಾ ಅಂಚನ್‌ರವರು ಕಾಲೇಜಿನ ಫಿಲೋಮಿನಾ ಕಾಲೇಜ್‌ನ ಪದವಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಹಾಗೂ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರಿಂದ ಮಾರ್ಗದರ್ಶನವನ್ನು ಪಡೆದಿದ್ದು, ನೆಲ್ಯಾಡಿ ನಿವಾಸಿ ಉದ್ಯಮಿ ರಮೇಶ್ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್‌ರವರ ಪುತ್ರಿ. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿದ್ದಾರೆ.

ನಡಿಗೆಯಲ್ಲಿ ರಾಷ್ಟ್ರಮಟ್ಟದ ಸಾಧನೆ…
ರಕ್ಷಾ ಅಂಚನ್‌ರವರು ಓರ್ವ ಪ್ರತಿಭಾನ್ವಿತೆ ಎನ್ನುವುದಕ್ಕೆ ಅವರೋರ್ವ ಉತ್ತಮ ಕ್ರೀಡಾಪಟುವಾಗಿರುವುದೇ ಸಾಕ್ಷಿಯಾಗಿದೆ. ಪಿಯುಸಿ ಶಿಕ್ಷಣ ಸಂದರ್ಭದಲ್ಲಿ ರಕ್ಷಾ ಅಂಚನ್‌ರವರು ನಡಿಗೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಪ್ರಥಮ ಪಿಯುಸಿ ಸಂದರ್ಭದಲ್ಲಿ ರಕ್ಷಾರವರು ರಾಜ್ಯಮಟ್ಟದ ಸಾಧನೆಯನ್ನು ಮಾಡಿದ್ದರು. ಫಿಲೋಮಿನಾ ಕಾಲೇಜಿನ ಹಿಂದಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ ಹಾಗೂ ನಡಿಗೆ ಸ್ಪರ್ಧೆಯಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಫಿಲೋಮಿನಾ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿಯೂ, ಪ್ರಸ್ತುತ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ರಾಜೇಶ್ ಮೂಲ್ಯರವರಿಂದ ಸೂಕ್ತ ಮಾರ್ಗದರ್ಶನ ಪಡೆದು ಕೇವಲ ತನ್ನ ಪಿಯುಸಿ ಶಿಕ್ಷಣದ ಎರಡು ವರ್ಷದ ಅವಧಿಯಲ್ಲಿಯೇ ನಡಿಗೆಯಲ್ಲಿ ಗಮನಾರ್ಹ ಸಾಧನೆಯನ್ನು ರಕ್ಷಾ ಅಂಚನ್‌ರವರು ಮಾಡಿರುವುದು ಶ್ಲಾಘನೀಯವಾಗಿದೆ.

೨೦೨೦, ಡಿಸೆಂಬರ್ ೧೭ ರಂದು ರಕ್ಷಾ ಅಂಚನ್‌ರವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೊರೋನಾ ಹಿನ್ನೆಲೆಯಲ್ಲಿ ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಜನವರಿ ಮೂರರಿಂದ ಪೆರೇಡಿನ ತರಬೇತಿ ಪ್ರಾರಂಭಗೊಂಡಿದ್ದು, ಜನವರಿ ೩೦ ರಂದು ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಕೊರೋನಾ ಹಾವಳಿಯ ಹಿನ್ನೆಲೆಯಲ್ಲೂ ರಕ್ಷಾ ಅಂಚನ್‌ರವರಯ ಧೃತಿಗೆಡದೆ ಹೆತ್ತವರ ಪ್ರೋತ್ಸಾಹದಿಂದ ಈ ಪ್ರತಿಷ್ಠಿತ ಪೆರೇಡಿನಲ್ಲಿ ಭಾಗವಹಿಸಲಿದ್ದಾರೆ.