ಬಂಟ್ವಾಳ : ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ, ಸಿ.ಐ.ಟಿ.ಯು, ಜನವಾದಿ ಮಹಿಳಾ ಸಂಘಟನೆ ವತಿಯಿಂದ ಖಾಸಗಿ ಫೈನಾನ್ಸ್‍ಗಳು ಬಲಾತ್ಕಾರವಾಗಿ ಸಾಲ ವಸೂಲಿ ಹಾಗೂ ಕಿರುಕುಳ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಪ್ರಮುಖರಾದ ರಾಮಣ್ಣ ವಿಟ್ಲ, ಶೋಭಾ ಕೊಯ್ಲ, ಜಯಂತಿ ಶೆಟ್ಟಿ, ಶೇಖರ ಲಾಯ್ಲ, ಮಹಮ್ಮದ್ ಇಕ್ಬಾಲ್ ಹಳೆಮನೆ, ಮಹಮ್ಮದ್ ಅಲ್ತಾಫ್ ತುಂಬೆ ಇದ್ದರು. ಹಾಗೆಯೇ ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಹಲವು ಖಾಸಗಿ ಫೈನಾನ್ಸ್‍ಗಳಿಂದ ಹಳ್ಳಿಯ ಮನೆ ಮನೆಗಳಿಗೆ ತೆರಳಿ ಬಡ ಮಹಿಳೆಯರನ್ನು ಗುರಿಯಾಗಿರಿಸಿ ದುಬಾರಿ ಬಡ್ಡಿಯ ಸಾಲ ನೀಡಿ ಸುಲಿಗೆ ಮಾಡುತ್ತಾರೆ ಎಂದು ಆರೋಪಿಸಿದ್ದು, ಕಾನೂನುಬಾಹಿರವಾಗಿ ನೀಡಿದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಮತ್ತು ದೌರ್ಜನ್ಯ ಎಸಗುವ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಹಾಗೂ ಮನೆಗೆ ಬಂದು ಸಾಲ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. ಹಾಗೇ ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಆಧಾರ್ ಕಾರ್ಡ್ ಆಧಾರದಲ್ಲಿ ಸಾಲ ನೀಡಿ, ಸಾಲ ವಸೂಲಾತಿ ವ್ಯಕ್ತಿಗಳಿಂದ ರಕ್ಷಣೆ ನೀಡಬೇಕು ಎಂದು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.