ಬಪ್ಪಳಿಗೆಯ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ಪರಾಕ್ರಮ ದಿವಸ್ ಆಚರಣೆ ಸುಭಾಷ್ ಚಂದ್ರ ಬೋಸ್ ಅವರು ಈ ದೇಶದ ಹೆಮ್ಮೆ; ರಾಮದಾಸ ಗೌಡ-ಕಹಳೆ ನ್ಯೂಸ್
ಪುತ್ತೂರು : ಭಾರತವನ್ನು ಬ್ರಿಟೀಷ್ ಆಡಳಿತದಿಂದ ಮುಕ್ತಗೊಳಿಸುವ ಬಗೆಗೆ ಪ್ರಬಲವಾದ ಕನಸು ಕಂಡದ್ದು ಮಾತ್ರವಲ್ಲದೆ ಆ ಕುರಿತಾಗಿ ತಮ್ಮ ನಿರಂತರ ಪ್ರಯತ್ನವನ್ನು ನಡೆಸಿದವರು ನೇತಾಜಿ ಸುಭಾಷ್ ಚಂದ್ರ ಬೋಸ್.
ಇಂಡಿಯನ್ ನ್ಯಾಶನಲ್ ಆರ್ಮಿಯನ್ನು ಕಟ್ಟುವುದರ ಮೂಲಕ ಭಾರತವನ್ನು ಸ್ವಾಂತಂತ್ರ್ಯದೆಡೆಗೆ ಮುನ್ನಡೆಯುವಂತೆ ಮಾಡುವಲ್ಲಿ ನೇತಾಜಿಯವರ ಕೊಡುಗೆ ಅಪಾರ ಎಂದು ಪುತ್ತೂರಿನ ನಿವೃತ್ತ ಕಮಾಂಡೆಂಟ್ ರಾಮದಾಸ ಗೌಡ ಹೇಳಿದರು. ಅವರು ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯಲ್ಲಿರುವ ಅಂಬಿಕಾ ಬಾಲವಿದ್ಯಾಲಯದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೂರಿಪ್ಪತ್ತೈದನೆಯ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ ಆಚರಿಸಲಾದ ಪರಾಕ್ರಮ ದಿವಸದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶನಿವಾರ ಮಾತನಾಡಿದರು. ನೇತಾಜಿಯರವರು ಈ ದೇಶದ ಹೆಮ್ಮೆ. ಅವರು ಅಸಂಖ್ಯ ಮಂದಿಗೆ ಸ್ವಾತಂತ್ರ್ಯದ ಕುರಿತಾಗಿ ಪ್ರೇರಣೆ ನೀಡಿದವರು. ಅವರ ಜನ್ಮದಿನವನ್ನು ಪರಾಕ್ರಮ ದಿವಸವಾಗಿ ಕೇಂದ್ರ ಸರ್ಕಾರ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ. ಸ್ವಾತಂತ್ರ್ಯ ಹೋರಾಟಕ್ಕೊಂದು ಧೈರ್ಯ ದೊರೆತಿರುವುದೇ ನೇತಾಜಿಯವರ ಸಮರ್ಥ ಕಾರ್ಯಾಚರಣೆಯಿಂದ ಎಂದು ನುಡಿದರು. ದೇಶ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಬದಲ್ಲಿ ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ತಾನೇನು ಮಾಡಬಹುದು ಎಂಬ ಯೋಚನೆಯನ್ನು ಮಾಡಬೇಕು. ಸಾಮಾಜಕ ಬದಲಾವಣೆಗಾಗಿ ಹೋರಾಟಕ್ಕಿಳಿಯಬೇಕಿಲ್ಲ. ಬದಲಾಗಿ ನಮ್ಮನ್ನು ನಾವು ಸೊಗಸಾಗಿ ರೂಪಿಸಿಕೊಳ್ಳಬೇಕು. ಅತ್ಯಂತ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದೇ ನಾವು ದೇಶಕ್ಕಾಗಿ ಕೊಡುವ ಕೊಡುಗೆ ಎಮದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂದು ನಾವೆಲ್ಲರೂ ಸ್ವಾತಂತ್ರ್ಯದ ಸುಖವನ್ನು ಪಡೆದಿದ್ದೇವೆ. ಅನೇಕ ಸಂದರ್ಭಗಳಲ್ಲಿ ಸ್ವಾತಂತ್ರ್ಯದ ಪರಿಧಿ ಮೀರಿ ಸ್ವೇಚ್ಚಾಚಾರಗಳೂ ನಡೆಯುತ್ತಿವೆ, ಆದರೆ ಈ ಎಲ್ಲವನ್ನೂ ನಾವು ಅನುಭವಿಸುತ್ತಿರುವುದು ಹಿಂದಿನ ಮಹಾನ್ ವ್ಯಕ್ತಿಗಳ ತ್ಯಾಗದ ಕಾರಣದಿಂದ ಎಂಬುದನ್ನು ಮರೆಯಬಾರದು. ನೇತಾಜಿಯಂತಹ ವ್ಯಕ್ತಿಗಳು ಈ ಇಂದಿನ ಮಕ್ಕಳಿಗೆ ಆದರ್ಶವಾಗಬೇಕು. ಆಗ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ನುಡಿದರು. ನಾವಿಂದು ವಿವಿಧ ಶೈಕ್ಷಣಿಕ ಹಾಗೂ ಅನ್ಯ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದೇವೆ. ಆದರೆ ಎಲ್ಲ ಒತ್ತಡಗಳ ನಡುವೆಯೂ ಣೇತಾಜಿಯವರ ಕುರಿತಾಗಿ ಕನಿಷ್ಟ ಅರ್ಧ ಗಂಟೆಯಷ್ಟಾದರೂ ಅಧ್ಯಯನ ನಡೆಸಿದರೆ ಪರಾಕ್ರಮ ದಿವಸಕ್ಕೆ ಸಾರ್ಥಕತೆ ಬರಲು ಸಾಧ್ಯ. ಸೇವೆ ಎಂಬುದು ಇಂದು ಮೌಲ್ಯ ಕಳೆದುಕೊಳ್ಳುತ್ತಿರುವ ಶಬ್ದವೆನಿಸಿದೆ. ಎಲ್ಲಾ ಕಚೇರಿಗಳ ಕೆಲಸವನ್ನೂ ಸೇವೆ ಎನ್ನಲಾಗುತ್ತಿದೆ. ಸೇವೆಯ ಭಾವವೇ ಇಲ್ಲದ ಕೆಲಸಗಗಳೂ ಸೇವೆನಿಸಿಕೊಳ್ಳುತ್ತಿವೆ. ಆದರೆ ಪ್ರಾಣವನ್ನೇ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಡುವುದು ನಿಜವಾದ ಸೇವೆ ಎಂದು ಹೇಳಿದರು. ಆಧ್ಯಕ್ಷತೆ ವಹಿಸಿದ್ದ ಅಂಬಿಕಾ ಆಡಳಿತ ಮಂಡಳಿ ನಿರ್ದೇಶಕ ಸುರೇಶ್ ಶೆಟ್ಟಿ ಮಾತನಾಡಿ ನೇತಾಜಿಯವರು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಅಪಾರ ಸಾಧನೆ ಮೆರೆದವರು. ನಿರಂತರವಾಗಿ ಹೋರಾಟದ ಹಾದಿಯನ್ನು ಸವೆಸಿದವರು. ಒಮ್ಮೆ ಅವರಿಗೆ ಆರು ತಿಂಗಳು ಜೈಲು ಶಿಕ್ಷೆಯಾದಾಗ ತನ್ನಂತಹ ದೇಶ ಭಕ್ತನಿಗೆ ಕೇವಲ ಆರು ತಿಂಗಳ ಜೈಲು ಶಿಕ್ಷೆಯೇ? ಕನಿಷ್ಟ ಆರು ವರ್ಷದ ಶಿಕ್ಷೆಯಾದರೂ ಬೇಕು ಎಂದು ಧೈರ್ಯವಾಗಿ ಘೋಷಿಸಿದವರು. ಅಂತಹವರನ್ನು ನೆನಪಿಸಿಕೊಳ್ಳಬೇಕಾದ್ದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.