ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ವಿಶಿಷ್ಟ ಕಾರ್ಯಕ್ರಮ; ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದವನ್ನು ಸನ್ಮಾನಿಸಿದ ಹೆತ್ತವರು!-ಕಹಳೆ ನ್ಯೂಸ್
ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ನಡೆಸುತ್ತಿರುವ ಬಪ್ಪಳಿಗೆಯಲ್ಲಿರುವ ಅಂಬಿಕಾ ವಿದ್ಯಾಲಯ ಶನಿವಾರ ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ಈ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಹೆತ್ತವರೆಲ್ಲರೂ ಒಂದೆರಡು ದಿನಗಳೊಳಗಾಗಿ ಪರಸ್ಪರ ಚರ್ಚಿಸಿ ರಕ್ಷಕ ಶಿಕ್ಷಕ ಸಂಘದ ಮೂಲಕ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರಿಗೆ ಅಚ್ಚರಿಯ ಅಭಿನಂದನಾ ಸಮಾರಂಭವನ್ನು ನಡೆಸಿಕೊಟ್ಟರು.
ಎರಡು ದಿನಗಳ ಹಿಂದೆ ಅಂಬಿಕಾ ವಿದ್ಯಾಲಯಕ್ಕೆ ಕೇಂದ್ರೀಯ ಶಿಕ್ಷಣ ಸಮಿತಿಯು ಸಿಬಿಎಸ್‍ಇ ಮಾನ್ಯತೆಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಹೆತ್ತವರೆಲ್ಲರೂ ಈ ಅಭಿನಂದನಾ ಕಾರ್ಯಕ್ರಮ ಆಯೋಜನೆಗಾಗಿ ಯೋಜನೆ ಹಾಕಿದ್ದರು. ಅದರನ್ವಯ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಪ್ರಾಂಶುಪಾಲೆ ಸುಜನಿ ಬೋರ್ಕರ್, ಉಪಪ್ರಾಂಶುಪಾಲೆ ಮಾಲತಿ ಡಿ ಹಾಗೂ ಎಲ್ಲಾ ಬೋಧಕ, ಬೋಧಕೇತರ ವೃಂದದವರನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ ಹಾಗೂ ಸಂಘದ ಸದಸ್ಯರುಗಳಾದ ವೈದ್ಯರಾದ ಡಾ.ಚೇತನ್ ಪ್ರಕಾಶ್, ಡಾ.ದೀಪಕ್ ಪೈ, ಉದ್ಯಮಿ ಚಂದ್ರಕಾಂತ್ ಪೈ, ನ್ಯಾಯವಾದಿಗಳಾದ ಪ್ರವೀಣ್ ಮತ್ತು ಕೃಷ್ಣಪ್ರಸಾದ್ ರೈ ಯಶವಂತ್ ಹಾಗೂ ಅವರು ಅಭಿಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಪ್ರೀತಿ, ವಿಶ್ವಾಸಗಳು ಸಂಸ್ಥೆಯನ್ನು ಬೆಳೆಸುತ್ತವೆ. ಯಾವುದೇ ವ್ಯವಸ್ಥೆಯ ಬೆಳವಣಿಗೆಯಲ್ಲಿ ವ್ಯಕ್ತಿಯೊಬ್ಬ ನೆಪ ಮಾತ್ರ. ಸರ್ವರ ಸಹಕಾರದಿಮದ ಮಾತ್ರ ವ್ಯವಸ್ಥೆ ಬಲಗೊಳ್ಳುತ್ತದೆ. ಅಂಬಿಕಾ ವಿದ್ಯಾಲಯಕ್ಕೆ ಸಿಬಿಎಸ್‍ಇ ಮಾನ್ಯತೆ ಬರುವಲ್ಲಿ ಶಿಕ್ಷಕರು, ಹೆತ್ತವರು, ವಿದ್ಯಾರ್ಥಿಗಳು ಹೀಗೆ ಹಲವರ ಪರಿಶ್ರಮವಿದೆ ಎಂದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ಸಂಸ್ಥೆಯನ್ನು ಆರಂಭಿಸುವುದು, ಮುನ್ನಡೆಸುವುದು ಅತ್ಯಂತ ಜವಾಬ್ಧಾರಿಯುತ ಹಾಗೂ ಅಪಾಯವನ್ನು ಮೇಲೆಳೆದುಕೊಳ್ಳುವ ಸಂಗತಿ. ಆದರೆ ಅಂಬಿಕಾ ವಿದ್ಯಾಸಂಸ್ಥೆಗೆ ಹೆತ್ತವರ ಅಭೂತಪೂರ್ವ ಬೆಂಬಲ ಇರುವುದರಿಂದ ಸಾಧನೆಗಳು ಸುಲಭ ಸಾಧ್ಯವೆನಿಸುತ್ತಿವೆ. ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳಲು ದೈರ್ಯ ಬರುತ್ತಿದೆ ಎಂದು ಹೇಳಿದರು. ಸಂಸ್ಥೆಯ ಪ್ರಾಂಶುಪಾಲೆ ಸುಜನಿ ಬೋರ್ಕರ್ ಮಾತನಾಡಿ ಹೆತ್ತವರೆಲ್ಲರೂ ಸೇರಿಕೊಂಡು ಸಂಸ್ಥೆಯ ಉದ್ಯೋಗಿಗಳನ್ನು, ಆಡಳಿತ ವರ್ಗವನ್ನು ಅಭಿನಂದಿಸುವುದು ಒಂದು ವಿಶಿಷ್ಟ ಕಾರ್ಯಕ್ರಮ. ಪ್ರಾಥಮಿಕ ಶಾಲೆ ನಡೆಸುವುದೇ ಒಂದು ಸವಾಲು. ವಿದ್ಯಾಥಿ ಮುಂದಿನ ಜೀವನದಲ್ಲಿ ಏನು ತಪ್ಪು ಮಾಡಿದರೂ ‘ಪ್ರಾಥಮಿಕ ಶಾಲೆಯಲ್ಲಿ ಇದಾ ಕಲಿಸಿದ್ದು’ ಎಂಬ ಮಾತೇ ಕೇಳಿಬರುತ್ತದೆ. ಹೀಗಿರುವಾಗ ಸಿಬಿಎಸ್‍ಇ ಸಂಸ್ಥೆ ನಡೆಸುವುದು ಮತ್ತಷ್ಟು ದೊಡ್ಡ ಜವಾಬ್ಧಾರಿ. ಎಂದರು. ಸಂಸ್ಥೆಯ ನಿರ್ದೇಶಕ ಸುರೇಶ್ ಶೆಟ್ಟಿ ಮಾತನಾಡಿ ಮಕ್ಕಳಿಗೆ ಪಾಠದಾಚೆಗಿನ ಸಂಗತಿಗಳನ್ನು ತಿಳಿಸಬೇಕಾದ ಅಗತ್ಯವಿದೆ. ಕಲಿಸುವುದಕ್ಕಿಂತ ಮುಖ್ಯವಾಗಿ ಕಲಿಯುವ ಹಾದಿಯನ್ನು ಸಮಪ್ಕವಾಗಿ ತೋರಬೇಕಿದೆ. ವಿದ್ಯಾರ್ಥಿಗಳ ಹೆತ್ತವರು ಕಾಲಕಾಲಕ್ಕೆ ಸಂಸ್ಥೆಯ ಕುರಿತು ಅಭಿಪ್ರಾಯ ನೀಡುತ್ತಿರಬೇಕು. ಸಲಹೆ ಸೂಚನೆಗಳ ಮೂಲಕ ಎಚ್ಚರಿಸುತ್ತಿರಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ್ ಕಜೆ ಸ್ವಾಗತಿಸಿ, ಅಂಬಿಕಾ ವಿದ್ಯಾಲಯದ ಎಲ್ಲಾ ಗುಣಮಟ್ಟವನ್ನು ಪರಿಶೀಲಿಸಿ ಸಿಬಿಎಸ್‍ಇ ಮಾನ್ಯತೆ ಒದಗಿಸಲಾಗಿದೆ. ಇಂತಹ ಸಾಧನೆ ಮೆರೆದ ಇಲ್ಲಿಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದವನ್ನು ಗೌರವಿಸುವುದು ಹೆತ್ತವರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪರಾಕ್ರಮ ದಿವಸ್ ಅಂಗವಾಗಿ ಏತಾಜಿಯವರ ಭಾವಚಿತ್ರಕ್ಕೆ ಹೂವನ್ನು ಸಮರ್ಪಿಸಲಾಯಿತು. ವೇದಿಕೆಯಲ್ಲಿ ಉಪಪ್ರಾಂಶುಪಾಲೆ ಮಾಲತಿ ಡಿ ಉಪಸ್ಥಿತರಿದ್ದರು. ಪೋಷಕಿ ಡಾ.ಪ್ರಸನ್ನಾ ಕಜೆ ಪ್ರಾರ್ಥಿಸಿದರು. ರಕ್ಷಕ ಶಿಕ್ಷಕ ಸಂಘದ ಪೂರ್ವಾಧ್ಯಕ್ಷ ಬಾಲಕೃಷ್ಣ ಬೋರ್ಕರ್ ವಂದಿಸಿದರು. ನ್ಯಾಯವಾದಿ ಸೀಮಾ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.