Recent Posts

Monday, January 20, 2025
ಪುತ್ತೂರು

ಪ್ರಥಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ, ‘ಮಣಿಕರ್ಣಿಕ’ ಮತ್ತಷ್ಟು ಮಾತುಗಾರರನ್ನು ಬೆಳೆಸಲಿ; ಡಾ. ಹೆಚ್. ಜಿ. ಶ್ರೀಧರ್-ಕಹಳೆ ನ್ಯೂಸ್

ಪುತ್ತೂರು : ಪ್ರತಿಯೊಂದು ಕೆಲಸವನ್ನು ಶ್ರಮ ಪಟ್ಟು ಮಾಡಿದರೆ ಅದರಲ್ಲಿನ ಪ್ರತಿಫಲ ನಮ್ಮದಾಗುತ್ತದೆ. ಪತ್ರಿಕೋದ್ಯಮ ಕಲಿಕೆ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದಿರಲಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಿಕೆ ಹಂತದಲಿ ಪ್ರಾಯೋಗಿಕ ಪತ್ರಿಕೋದ್ಯಮವನ್ನು ಅರಿಯುವ ಹಲವು ಅವಕಾಶಗಳು ಸಿಗುತ್ತವೆ. ಯಾವಾಗ ಮಾತನಾಡುವ ಅವಕಾಶಗಳು ದೊರೆಯುತ್ತದೆಯೊ ಆಗ ಹಿಂಜರಿಯದೆ ವೇದಿಕೆಗೆ ಹೋಗಬೇಕು. ‘ಮಣಿಕರ್ಣಿಕ’ದಂತಹ ವೇದಿಕೆಯ ಮೆಟ್ಟಿಲು ಏರಿದಾಗಲೇ ನಮ್ಮಲ್ಲಿ ಹೊಸ ಆಲೋಚನೆಗಳು ಬರುವುದಕ್ಕೆ ಸಾಧ್ಯ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್.ಜಿ ಶ್ರೀಧರ್ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಎ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಆಯೋಜಿಸಿದ ‘ಮಣಿಕರ್ಣಿಕ ಮಾತುಗಾರರ ವೇದಿಕೆ’ಯ ಮೊದಲ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಗುರುವಾರ ಮಾತನಾಡಿದರು. ಭಯ ಎಂಬುದು ಎಲ್ಲರಲ್ಲೂ ಅಡಕವಾಗಿದೆ. ಅದನ್ನು ಎದುರಿಸುವ ಪ್ರಯತ್ನ ನಾವು ಮಾಡಬೇಕು. ನಿರ್ದಿಷ್ಟವಾಗಿ ಒಂದು ಕೆಲಸ ಆರಿಸಿಕೊಂಡಾಗ ಅದರಲ್ಲಿ ಶ್ರದ್ಧೆಯ ಜೊತೆ ಆಸಕ್ತಿಯು ಇರಬೇಕು. ಹಾಗೆಯೇ ಒಂದು ವಿಷಯದ ಕುರಿತಾಗಿ ಮಾತನಾಡುವ ಮುನ್ನ ನಮ್ಮಲ್ಲಿ ಪೂರ್ವ ತಯಾರಿ ಇದ್ದರೆ ಉತ್ತಮ. ಕೆಲವು ಸಂದರ್ಭದಲ್ಲಿ ವಿಷಯಗಳು ತಿಳಿದಿರುವುದಿಲ್ಲ. ಆಗ ಹಿರಿಯರೊಂದಿಗೆ ಬೆರೆತು ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಉಪಸ್ಥಿತರಿದ್ದ ಕಾಲೇಜಿನ ಇಂಗ್ಲೀಷ್ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್ ಎ. ಮಾತನಾಡಿ ಪತ್ರಿಕೋದ್ಯಮ ಕಲಿಕೆಯ ಹಂತದಲ್ಲಿಯೇ ಹಲವು ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ನಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಜೀವನದಲ್ಲಿ ಅಂಕ ಮುಖ್ಯ ಅಲ್ಲ, ನಮ್ಮಲ್ಲಿರುವ ಕೌಶಲ್ಯಗಳು ಮುಖ್ಯವಾಗಿರುತ್ತವೆ. ‘ಮಣಿಕರ್ಣಿಕ’ದಂತಹ ವೇದಿಕೆಯು ನಮ್ಮ ಕೌಶಲ್ಯಾಭಿವೃದ್ಧಿಗೆ ಒಳ್ಳೆಯ ಅವಕಾಶ ನೀಡುತ್ತದೆ ಎಂದು ನುಡಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ. ಆರ್. ನಿಡ್ಪಳ್ಳಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ‘ಪದವಿಯತ್ತ ಮೊದಲ ಹೆಜ್ಜೆ’ ಎಂಬ ವಿಷಯದ ಕುರಿತಾಗಿ ಪ್ರಥಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಭಾಗದ ಉಪನ್ಯಾಸಕಿ ಸೀಮಾ ಪೋನಡ್ಕ ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಚೈತ್ರಾ ಪುರ ಮತ್ತು ಹರ್ಷಿತಾ ಎಸ್. ವಿ. ಪ್ರಾರ್ಥಿಸಿ, ಸುಕನ್ಯಾ ಎನ್. ಆರ್. ಸ್ವಾಗತಿಸಿದರು. ವಿದ್ಯಾರ್ಥಿನಿ ವಿನಿತಾ ಎಸ್. ಪ್ರಸ್ತಾವನೆಗೈದರು. ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಸೌಜನ್ಯ ಬಿ.ಎಂ. ಕೆಯ್ಯೂರು ವಂದಿಸಿದರು. ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಬೃಂದಾ ಪಿ. ಮುಕ್ಕೂರು ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು