ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ ಸನ್ಮಾನ ರಾಷ್ಟ್ರಮಟ್ಟದ ಹೈಜಂಪ್ ಸ್ಫರ್ಧೆಗೆ ಆಯ್ಕೆಯಾದ ಚರಿತ್ ಪ್ರಕಾಶ್-ಕಹಳೆ ನ್ಯೂಸ್
ಪುತ್ತೂರು: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 36 ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಹೈ ಜಂಪ್ ಸ್ಫರ್ಧೆಯಲ್ಲಿ 1.65ಮೀಟರ್ ಎತ್ತರ ಜಿಗಿಯುವುದರೊಂದಿಗೆ ದ್ವಿತೀಯ ಸ್ಥಾನ ಗಳಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚರಿತ್ ಪ್ರಕಾಶ್ ನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಶಾಲು ಹೊದಿಸಿ ಅಭಿನಂದಿಸಿದರು. ನಂತರ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಾಯ ಮಾಡುತ್ತದೆ.
ಶಾಲಾ ಕಾಲೇಜು ಮಟ್ಟದ ಕ್ರೀಡಾ ಕೂಟಗಳಿಂದ ಸ್ನೇಹ ಸೌಹಾರ್ದತೆಗಳು ಏರ್ಪಡುತ್ತವೆ. ಕ್ರೀಡಾಪಟುಗಳಿಗೆ ದೇಶ ವಿದೇಶ ಮಟ್ಟದಲ್ಲಿ ವಿಶೇಷ ಮನ್ನಣೆಯಿದೆ. ರಾಷ್ಟ್ರೀಯ ಸಂಬಂಧಗಳ ವೃದ್ಧಿಗೆ ಕ್ರೀಡೆಗಳ ಕೊಡುಗೆ ಅಪಾರವಾಗಿದೆ ಎಂದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್ ಮಾತನಾಡಿ ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ. ಜೊತೆಗೆ ವಿದ್ಯಾರ್ಥಿ ಚರಿತ್ ಪ್ರಕಾಶ್ನು ಫೆಬ್ರವರಿ ಆರರಿಂದ ಹತ್ತರವರೆಗೆ ಅಸ್ಸಾಂ ರಾಜ್ಯದ ಗುಹಾವಟಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಹೈಜಂಪ್ ಸ್ಫರ್ಧೆಯಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ,ಯತೀಶ್,ಅಧ್ಯಾಪಕ ವೃಂದ ಮತ್ತು ಅಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು. ಚರಿತ್ ಪ್ರಕಾಶ್ ನು ಸುಳ್ಯ ತಾಲೂಕಿನ ಪಂಜದ ಚಂದ್ರಪ್ರಕಾಶ ಕೆ ಮತ್ತು ಹಂಸವತಿ ದಂಪತಿಗಳ ಪುತ್ರ.