Monday, January 20, 2025
ಪುತ್ತೂರು

ವೃತ್ತಿ ಜೀವನಕ್ಕೆ ವಿದಾಯ ಹೇಳಲಿರುವ ವಿವೇಕಾನಂದ ಪದವಿ ಕಾಲೇಜಿನ ಕ್ಯಾಪ್ಟನ್ ಡಿ. ಮಹೇಶ್ ರೈ-ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಕ್ಯಾ.ಮಹೇಶ್ ರೈ ಜ.೩೧ರಂದು ವೃತ್ತಿಬದುಕಿನಿಂದ ನಿವೃತ್ತರಾಗಲಿದ್ದಾರೆ.

ವಿವೇಕಾನಂದ ಕಾಲೇಜಿನಲ್ಲಿ ಪದವಿಶಿಕ್ಷಣ ಪೂರೈಸಿ ಕನ್ನಡ ವಿಷಯದಲ್ಲಿ ಎಂ.ಎ ಪದವಿ ಮುಗಿಸಿದ ನಂತರ ೧೯೮೬ರಲ್ಲಿ ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ವೃತ್ತಿಬದುಕು ಆರಂಭಿಸಿದ ಇವರು ಕಾಲೇಜಿನಲ್ಲಿ ಶಿಸ್ತಿನ ಅಧ್ಯಾಪಕರೆಂದೇ ಹೆಸರಾದವರು. ಎನ್‌ಸಿಸಿ ತರಬೇತಿ ಹೊಂದಿ ಕ್ಯಾಪ್ಟನ್ ಪದವಿಗೆ ಭಾಜನರಾಗಿರುವ ಇವರು ೧೯೯೯ರಿಂದ ೨೦೧೮ರವರೆಗೆ ಸಮರ್ಥ ಎನ್ ಸಿ ಸಿ ಘಟಕವನ್ನು ರೂಪಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಗರಡಿಯಲ್ಲಿ ಪಳಗಿರುವ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಪೋಲೀಸ್ ಅಧಿಕಾರಿಗಳಾಗಿ, ಸೈನಿಕರಾಗಿ ದೇಶಸೇವೆಯಲ್ಲಿ ತೊಡಗಿಕೊಂಡಿರುವುದು ಗಮನಾರ್ಹ. ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಳೆಗನ್ನಡದ ಸೊಗಸನ್ನು ಎತ್ತಿತೋರಿದವರಲ್ಲಿ ಮಹೇಶ್ ರೈ ಕೂಡ ಒಬ್ಬರು. ಹಳೆಗನ್ನಡ ಪಾಠವನ್ನು ಬೋಧಿಸುವುದರಲ್ಲಿ ಮಹೇಶ್ ರೈ ಅವರದು ಎತ್ತಿದ ಕೈ. ವಿವೇಕಾನಂದ ಕಾಲೇಜಿನ ‘ಯಕ್ಷರಂಜಿನಿ’ ಯಕ್ಷಗಾನ ತಂಡವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ ಹೆಮ್ಮೆ ಇವರದು. ಸ್ವತಃ ಬಣ್ಣದ ವೇಷಧಾರಿಯಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ಪಟ್ಟುಗಳನ್ನು ಕಲಿಸಿಕೊಡುತ್ತಾ ಅತ್ಯುತ್ತಮ ಯಕ್ಷಕಲಾ ತಂಡ ಕಟ್ಟಿ ಬೆಳೆಸಿದವರು. ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅನೇಕ ಬಹುಮಾನಗಳಿಗೆ ಪಾತ್ರರಾಗಿರುವುದು, ತಂಡ ಪ್ರಶಸ್ತಿ ಪಡೆದಿರುವುದು ಉಲ್ಲೇಖಾರ್ಹ. ಹಾಗೆಯೇ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಲ್ಲಿ ಒಬ್ಬರಾಗಿಯೂ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದಾರೆ. ಸಾಹಿತ್ಯ, ಯಕ್ಷಗಾನ, ಕೃಷಿ,ಆಧ್ಯಾತ್ಮ, ಚಾರಣ, ಪ್ರವಾಸ, ಕ್ರೀಡೆ ಹೀಗೆ ನಾನಾ ರಂಗಗಳಲ್ಲಿ ಆಸಕ್ತಿ ಹೊಂದಿರುವ ಕ್ಯಾಪ್ಟನ್ ಡಿ.ಮಹೇಶ್ ರೈ ನಿವೃತ್ತಿಯಾಗುತ್ತಿರುವುದು ವಿದ್ಯಾರ್ಥಿ ಸಮುದಾಯಕ್ಕೆ ಬಹುದೊಡ್ಡ ನಷ್ಟವೆನಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು