Recent Posts

Monday, April 14, 2025
ಬಂಟ್ವಾಳ

ಸೂರಿಕುಮೇರಿನಲ್ಲಿ ಮತ್ತೆ ಗ್ಯಾಸ್ ಟ್ಯಾಂಕರ್ ಪಲ್ಟಿ, ಹೆದ್ದಾರಿ ಸಂಚಾರ ಬ್ಲಾಕ್; ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿ-ಕಹಳೆ ನ್ಯೂಸ್

ಬಂಟ್ವಾಳ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗದಲ್ಲಿ ಇಂದು ಬೆಳಗ್ಗೆ ಸುಮಾರು 3 ರಿಂದ 4 ಗಂಟೆ ಮಧ್ಯೆ ಗ್ಯಾಸ್ ಟ್ಯಾಂಕರ್ ಒಂದು ರಸ್ತೆ ಮಧ್ಯಕ್ಕೆ ಉರುಳಿಬಿದ್ದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪರಿಣಾಮ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಘಟನೆಯಲ್ಲಿ ಗ್ಯಾಸ್ ಲೀಕ್ ಆಗದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಅದರೂ ಮುಂಜಾಗರೂಕತಾ ಕ್ರಮವಾಗಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಈಗಾಗಲೇ ತಾಂತ್ರಿಕ ತಂಡ ಸ್ಥಳಕ್ಕೆ ಆಗಮಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ ಸುರಕ್ಷಿತವಾಗಿ ಟ್ಯಾಂಕರ್ ಅನ್ನು ಲಿಫ್ಟ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ವಿಟ್ಲ ಪೊಲೀಸ್ ಎಸ್.ಐ. ವಿನೋದ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್ಸೈ ರಾಜೇಶ್ ಕೆ.ವಿ. ಮತ್ತು ವಿಟ್ಲ, ಬಂಟ್ವಾಳ ಟ್ರಾಫಿಕ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಬದಲಿ ರಸ್ತೆಯ ಸೂಚನೆಗಳನ್ನು ನೀಡುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಾಹನ ಸಂಚಾರವನ್ನು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಕಲ್ಲಡ್ಕ ಭಾಗದಲ್ಲಿ ಸ್ಥಗಿತಗೊಳಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನವನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಮತ್ತು ಬೆಂಗಳೂರು, ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳನ್ನು ಮಾಣಿ, ಬುಡೋಳಿ, ಕಬಕ ಮೂಲಕ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಹಾಗೇ ವಿವಿಧ ಭಾಗದಲ್ಲಿ ಬುಡೋಳಿ ಯೂತ್ ಫೆಡರೇಶನ್, ಸೂರಿಕುಮೇರು ಬದ್ರಿಯಾ ಯಂಗ್ ಮೆನ್ಸ್ ಸದಸ್ಯರು, ಸಾರ್ವಜನಿಕರು ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ. ಅನಿಲ ಸೋರಿಕೆಯಾಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನೂ ಮಸೀದಿ ಧ್ವನಿ ವರ್ಧಕದ ಮೂಲಕ ಸುತ್ತಮುತ್ತಲಿನ ಭಾಗದ ಮನೆಗಳಲ್ಲಿ ಬೆಂಕಿ ಬಳಸದಂತೆ ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲದೇ ಈ ಹಿಂದೆಯೂ ಕೂಡ ಪೆರ್ನೆಯಲ್ಲಿ ಕೆಲ ವರ್ಷಗಳ ಹಿಂದೆ ಅನಿಲ ಟ್ಯಾಂಕರ್ ಅಪಘಾತದಲ್ಲಿ ಜೀವಹಾನಿ ಸಂಭವಿಸಿತ್ತು, ಮತ್ತು 2016ರಲ್ಲಿ ಸೂರಿಕುಮೇರುವಿನಲ್ಲಿ ಟ್ಯಾಂಕರ್ ಮಗುಚಿ ದಿನವಿಡೀ ರಸ್ತೆ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯರು ಭೀತರಾಗಿದ್ದರು. ಆದರೆ ಹೆದ್ದಾರಿ ಅಪಘಾತ ಸಂಭವಿಸಿದ ವೇಳೆ ಅಂದಿನ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಗ್ಯಾಸ್ ಟ್ಯಾಂಕರ್ ರಾತ್ರಿ ಸಾಗುವ ವಿಚಾರದ ಕುರಿತು ಸೂಚನೆಗಳನ್ನು ಹೊರಡಿಸಿದ್ದರು. ಆದರೆ ನಿರಾತಂಕವಾಗಿ ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ಭಾರಿ ಗಾತ್ರದ ಅನಿಲ ಟ್ಯಾಂಕರುಗಳು ಸಾಗುತ್ತಿದ್ದು, ಸಮೀಪದ ಮನೆಯವರಿಗೆ ನಿತ್ಯ ಆತಂಕಕ್ಕೆ ಕಾರಣವಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ