ಫೆಬ್ರವರಿ 3 ಮತ್ತು 4ರಂದು ಎರಡು ದಿನಗಳ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು ವೈದ್ಯಕೀಯ ಶಿಬಿರ -ಕಹಳೆ ನ್ಯೂಸ್
ಕೋವಿಡ್-19 ಕಾರಣದಿಂದಾಗಿ ವಿಶೇಷ ಅಗತ್ಯವುಳ್ಳ 10ನೇ ತರಗತಿ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಯಿಂದ ಪರೀಕ್ಷೆಗೆ ಒಳಗಾಗಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಕಾಲದಲ್ಲಿ ಪಡೆಯಲು ಸಾಧ್ಯವಾಗಿರಲಿಲ್ಲ.
ಈ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿವಿಧ ವಿನಾಯಿತಿ/ಸೌಲಭ್ಯಗಳನ್ನು ನೀಡಲು ಅವಕಾಶವಿರುತ್ತದೆ. 2021ರ ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಂದಣಿ ಫೆಬ್ರವರಿ 1 ರಿಂದ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ಈ ಸೀಮಿತ ಅವಧಿಯಲ್ಲಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳು ಜಿಲ್ಲಾ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುತುವರ್ಜಿಯಿಂದ ಜಿಲ್ಲಾ ವ್ಯಾಪ್ತಿಯ ಪ್ರೌಢ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 03-02-2021 ಹಾಗೂ 04-02-2021 ರಂದು ಎರಡು ದಿನಗಳ ವೈದ್ಯಕೀಯ ಶಿಬಿರವನ್ನು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ 02 ಮನಃಶಾಸ್ತ್ರಜ್ಞರು, 02-ನೇತ್ರ ತಜ್ಞರು, 01-ಕಿವಿ, ಮೂಗು, ಗಂಟಲು ತಜ್ಞರು, 01-ಮಕ್ಕಳ ತಜ್ಞರು, 01-ಮೂಳೆ ತಜ್ಞರು, 04-ಮನೋವೈದ್ಯರು, ಒಟ್ಟು 11 ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿದ್ದರು. ಹಾಗೆಯೇ ಬಂಟ್ವಾಳ 44, ಬೆಳ್ತಂಗಡಿ 22, ಮಂಗಳೂರು ಉತ್ತರ 123, ಮಂಗಳೂರು ದಕ್ಷಿಣ 111, ಮೂಡಬಿದ್ರೆ 18, ಪುತ್ತೂರು 47, ಸುಳ್ಯ 9, ಒಟ್ಟು 374 ವಿದ್ಯಾರ್ಥಿಗಳು ಶಿಬಿರಕ್ಕೆ ನೋಂದಣಿಯಾಗಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಪ್ರಮಾಣ ಪತ್ರ ಪಡೆದುಕೊಂಡವರಿಗೆ ನಿಯಮಾನುಸಾರ ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಭಾಷಾ ವಿನಾಯಿತಿ, ವಿಷಯ ವಿನಾಯಿತಿ, ಓದುಗಾರರ/ಬರಹಗಾರರ ಸೌಲಭ್ಯ, ಹೆಚ್ಚುವರಿ ಸಮಯದ ಸೌಲಭ್ಯ ಇತ್ಯಾದಿಗಳನ್ನು ನೀಡಲಾಗುವುದು. ಈ ಶಿಬಿರದಲ್ಲಿ ಪಾಲ್ಗೊಂಡು ಸಹಕರಿಸಿದ ಎಲ್ಲಾ ವೈದ್ಯರುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.