ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ಅನುಪಮ’ ಭಿತ್ತಿಪತ್ರಿಕೆ ಅನಾವರಣ ಪತ್ರಿಕೋದ್ಯಮದಲ್ಲಿ ಸೃಜನಶೀಲತೆ ಮತ್ತು ಕೌಶಲ್ಯ ಅಗತ್ಯ; ಡಾ.ಜಿ.ಎನ್.ಭಟ್-ಕಹಳೆ ನ್ಯೂಸ್
ಪುತ್ತೂರು : ಪತ್ರಿಕೋದ್ಯಮದಲ್ಲಿ ಸೃಜಶೀಲತೆ ಹೆಚ್ಚು ಮಹತ್ವದ್ದು. ವಿದ್ಯಾರ್ಥಿ ಜೀವನದಲ್ಲಿ ಭಿತ್ತಿಪತ್ರಿಕೆಯನ್ನು ರೂಪಿಸುವುದು ಕೌಶಲ್ಯ ಅಭಿವೃದ್ಧಿ ಪಡಿಸುವುದಕ್ಕಿರುವ ಒಂದು ದಾರಿ. ನಾಳಿನ ಅತ್ಯುತ್ತಮ ಪತ್ರಕರ್ತರ ಸೃಷ್ಟಿಗೆ ಇಂತಹ ಪ್ರಾಯೋಗಿಕ ಅನುಭವಗಳು ಸಹಾಯ ಮಾಡುತ್ತವೆ.
ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಾರ್ಯಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಬೆಂಗಳೂರಿನ ಎಸ್. ವ್ಯಾಸ ಸಂಸ್ಥೆಯ ನಿವೃತ್ತ ಡೀನ್ ಡಾ.ಜಿ.ಎನ್. ಭಟ್ ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಿದ ‘ಅನುಪಮ’ ಎಂಬ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿ ಶುಕ್ರವಾರ ಮಾತನಾಡಿದರು. ಪತ್ರಕರ್ತರಿಗೆ ಸಮಾಜದಲ್ಲಿ ಅತ್ಯಂತ ಹೆಚ್ಚಿನ ಜವಾಬ್ಧಾರಿ ಇದೆ. ಹಾಗಾಗಿ ಸಂವೇದನಾಶೀಲ ಬರವಣಿಗೆಗೆ ಅತೀವ ಒತ್ತು ನೀಡಬೇಕಿದೆ. ಸಮಾಜಮುಖಿ ಬರವಣಿಗೆಗೆ ಅಡಿಯಿಟ್ಟಾಗ ಸಂಕಷ್ಟಕ್ಕೆ ಒಳಗಾಗುವ ಸನ್ನಿವೇಶವೂ ಎದುರಾಗುವ ಸಾಧ್ಯತೆ ಇದೆ. ಹಾಗೆಂದು ಧೃತಿಗೆಡದೆ ಮುನ್ನಡೆದು ತಾನು ನಂಬಿದ ವಿಷಯಕ್ಕೆ ಬದ್ಧನಾಗಿ ಮುಂದುವರೆಯುವುದು ಬಹುದೊಡ್ಡ ಸವಾಲು. ಪತ್ರಕರ್ತರ ಬರವಣಿಗೆಗಳು ಪ್ರಾಯೋಗಿಕ ಮತ್ತು ವಾಸ್ತವಿಕವಾಗಿದ್ದರೆ ಅದು ಸಹಜವಾಗಿಯೇ ಜನಮನ್ನಣೆ ಗಳಿಸುತ್ತವೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಇಂದು ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ. ಅದರಲ್ಲೂ ಪತ್ರಿಕೋದ್ಯಮದಲ್ಲಿ ಇಂತಹ ಕುಸಿತ ತೀವ್ರತರವಾಗಿರುವುದನ್ನು ಗಮನಿಸುತ್ತಿದ್ದೇವೆ. ಆದ್ದರಿಂದ ನೈತಿಕವಾಗಿ ಶಕ್ತಿಯುತರಾಗಿರುವಂತಹ ನಾಗರಿಕರು ಹಾಗೂ ಪತ್ರಕರ್ತರು ಸಮಾಜಕ್ಕೆ ಬೇಕಾಗಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ನೈತಿಕತೆಯನ್ನು ಒಡಮೂಡಿಸಿಕೊಂಡು ಬೆಳೆದಾಗ ಉದ್ದೇಶ ಈಡೇರುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ಭಾರತೀಯತೆಯ ನೆಲೆಯಲ್ಲಿ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಆಯಾವಿಭಾಗದ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರೊಂದಿಗೆ ಸಮಾಜದ ಭಾಗವಾಗಿಯೂ ಮುನ್ನಡೆಯಬೇಕು. ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಮೂಲಕ ಸಾಧನೆಯನ್ನು ಸಾಧ್ಯಮಾಡಿಕೊಳ್ಳಬೇಕು. ಪ್ರಾಯೋಗಿಕ ಅನುಭವಗಳು ಮನುಷ್ಯನನ್ನು ಅನುಭವಿಯನ್ನಾಗಿಸುತ್ತವೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಪತ್ರಿಕೋದ್ಯಮದಲ್ಲಿ ಸಣ್ಣ ಸಣ್ಣ ವಿಷಯಗಳೂ ಪ್ರಮುಖ ಪಾತ್ರವಹಿಸುತ್ತವೆ. ವ್ಯಂಗ್ಯಚಿತ್ರಗಳಂತಹ ಸಣ್ಣ ಅಂಕಣಗಳು ಅನೇಕ ದಶಕಗಳವರೆಗೆ ಕಾಡುವಂತೆ ನಿರೂಪಿಸಲ್ಪಡುತ್ತವೆ. ಇದು ಪತ್ರಿಕೋದ್ಯಮದ ಸಾಧ್ಯತೆ. ನಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಬಹುದೊಡ್ಡ ಹೊಣೆ ಪತ್ರಿಕಾ ಮಾಧ್ಯಮಕ್ಕಿದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿಯೇ ವಿದೇಶೀ ಸಂಸ್ಕøತಿಯ ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಶಕ್ತಿಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ಭಿತ್ತಿಪತ್ರಿಕೆಯ ಸಂಪಾದಕಿ ಶ್ರೀಲಕ್ಷ್ಮಿ, ಪುಟವಿನ್ಯಾಸಗಾರ್ತಿ ವೈಷ್ಣವೀ ಜೆ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅದಿತಿ ಎಂ.ಎಸ್ ಸ್ವಾಗತಿಸಿ, ವಿದ್ಯಾರ್ಥಿ ಮನೀಶ್ ಅಂಚನ್ ವಂದಿಸಿದರು. ಶ್ರೀಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.