ಮಹಾನಗರ: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 22ನೇ ಶ್ರಮದಾನ ಕುಲಶೇಖರದಲ್ಲಿ ರವಿವಾರ ಜರಗಿತು.
ನಿಟ್ಟೆ ಫಿಸಿಯೋಥೆರಫಿ ಉಪನ್ಯಾಸಕರಾದ ಡಾ| ರಾಕೇಶ್ ಕೃಷ್ಣ ಹಾಗೂ ಜಪಾನಿ ಪ್ರಜೆ ಮಸಾಹಿರೊ ಅವರು ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್ ಕಾರ್ಣಿಕ್, ಪ್ರೊ| ಸತೀಶ್ ಭಟ್, ನಜೀರ್ ಅಹ್ಮದ್, ಜೊಸೆಫ್ ರೊಡ್ರಿಗಸ್, ಹಿಮ್ಮತ್ ಸಿಂಗ್ ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು.
ಚಾಲನೆ ನೀಡಿದ ಬಳಿಕ ಕಾರ್ಯಕರ್ತರು ಕುಲಶೇಖರ-ಶಕ್ತಿನಗರ ಜಂಕ್ಷನ್‌ನಲ್ಲಿ ಸ್ವಚ್ಛತೆಯನ್ನು ಆರಂಭಿಸಿದರು. ಒಟ್ಟು
ನಾಲ್ಕು ತಂಡಗಳಲ್ಲಿ ಸ್ವತ್ಛತಾ ಕಾರ್ಯ ನಡೆಯಿತು. ನಿಟ್ಟೆ ಫಿಸಿಯೊಥೆರಫಿ ಕಾಲೇಜಿನ ವಿದ್ಯಾರ್ಥಿಗಳನ್ನು ಸೌಮ್ಯಾ ಶ್ರೀವತ್ಸ ಮಾರ್ಗದರ್ಶನದಲ್ಲಿ ಶಕ್ತಿನಗರ ಕ್ರಾಸ್‌ನಿಂದ ಬಿಕರ್ನಕಟ್ಟೆಯತ್ತ ಸಾಗುವ ಮಾರ್ಗಗಳನ್ನು ಸ್ವಚ್ಛಗೊಳಿಸಿದರು.
ಮತ್ತೊಂದು ತಂಡ ಡಾ| ಪುರುಷೋತ್ತಮ ಜತೆಯಾಗಿ ತೋಡುಗಳನ್ನು ಹಾಗೂ ಖಾಲಿ ಜಾಗೆಯಲ್ಲಿ ಬಿದ್ದಿದ್ದ ಕಸ ಹೆಕ್ಕಿ
ಶುಚಿಗೊಳಿಸಿದರು. ಜಯಕೃಷ್ಣ ಬೇಕಲ್ ಹಾಗೂ ಇತರ ಕಾರ್ಯಕರ್ತರು ಕುಲಶೇಖರ ಬಸ್ ತಂಗುದಾಣದ ಎದುರಿನ ಒಳರಸ್ತೆ ಹಾಗೂ ತೋಡುಗಳನ್ನು ಹಸನು ಮಾಡಿದರು.
ಬಿದ್ದಿದ್ದ ಕಲ್ಲು ಚಪ್ಪಡಿ ದುರಸ್ತಿ
ಹಿಂದೂ ವಾರಿಯರ್ಸ್ ಸದಸ್ಯರು ಶಕ್ತಿನಗರಕ್ಕೆ ಸಾಗುವ ರಸ್ತೆಯನ್ನು ಸ್ವಚ್ಛಗೊಳಿಸಿದರು. ಸುಧೀರ್ ವಾಮಂಜೂರು
ಹಾಗೂ ರವಿ ಕೆ.ಆರ್. ನೇತೃತ್ವದಲ್ಲಿ ಬಸ್ ಸ್ಟಾಪ್ ಎದುರಿಗೆ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಕಲ್ಲು ಚಪ್ಪಡಿಗಳನ್ನು ಪಾದಚಾರಿ ಮಾರ್ಗಕ್ಕೆ ಸರಿಯಾಗಿ ಜೋಡಿಸಿ ದಾರಿಹೋಕರಿಗೆ ಅನುಕೂಲ ಮಾಡಿಕೊಡಲಾಯಿತು.
ತ್ಯಾಜ್ಯ ರಾಶಿ ತೆರವು
ನಗರದ ಅಲ್ಲಲ್ಲಿ ಕಾಣುವ ತ್ಯಾಜ್ಯ ರಾಶಿಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಶುಚಿಯಾಗಿಡುವುದು ಮತ್ತು ಸುಂದರವನ್ನಾಗಿಸುವ ಕಾರ್ಯವನ್ನು ಕಾರ್ಯಕರ್ತರು ಅಲ್ಲಲ್ಲಿ ನೆರವೇರಿಸಿ ಯಶಸ್ವಿಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಇಂಚರ್ ರೆಸ್ಟೋರೆಂಟ್ ಎದುರುಗಿನ ತ್ಯಾಜ್ಯ ಬಿಸಾಕುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ಅನಂತರ ಜೇಸಿಬಿ ಸಹಾಯದಿಂದ ಮಣ್ಣನ್ನು ಹಾಕಿ ಸಮತಟ್ಟುಗೊಳಿಸಿ ಅಲಂಕಾರಿಕ ಹೂಕುಂಡಗಳನ್ನಿಟ್ಟು ಸುಂದರಗೊಳಿಸಲಾಯಿತು. ಸಂದೀಪ್ ಕೋಡಿಕಲ್ ಹಾಗೂ ಮಹಮ್ಮದ್ ಶಮೀಮ್ ಸೇರಿದಂತೆ ಅನೇಕ ಕಾರ್ಯಕರ್ತರು ಶ್ರಮದಾನಗೈದರು.
ಸ್ವಚ್ಛತಾ ಜಾಗೃತಿ
ನಿವೇದಿತ ಬಳಗದ ಸದಸ್ಯರು, ಕೋಡಂಗೆ ಬಾಲಕೃಷ್ಣ ನಾಯ್ಕ ಜತೆಯಾಗಿ ಕುಲಶೇಖರ ಮುಖ್ಯರಸ್ತೆಯಲ್ಲಿರುವ ಮನೆಗಳಿಗೆ ತೆರಳಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸ್ವಚ್ಛತೆಗೂ ಮುನ್ನ ತ್ಯಾಜ್ಯರಾಶಿಯ ಸುತ್ತಮುತ್ತಲಿನ ಅಂಗಡಿ, ಹೊಟೇಲ್, ತರಕಾರಿ ಮಳಿಗೆಗಳಿಗೆ ತೆರಳಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ವಿನಂತಿಸಲಾಯಿತು. ಅದಲ್ಲದೇ ಕಸಸಂಗ್ರಹ ವಾಹನ ಮೇಲ್ವಿಚಾರಕರನ್ನು ಕರೆಯಿಸಿ, ಸಮಯ ಸಂಯೋಜನೆ ಮಾಡಿಸುವಂತೆಯೂ ಕೇಳಿಕೊಳ್ಳಲಾಯಿತು.
ಅಶೋಕ ಸುಬ್ಬಯ್ಯ, ಸುಜಿತ್ ಪ್ರತಾಪ್, ಇಮ್ತಿಯಾಜ್ ಅಹ್ಮದ್, ದೀಪಕ್ ಮೇಲಂಟ, ಅರ್ಜುನ್ ಜೋಶಿ ಸೇರಿದಂತೆ ಅನೇಕ ಸ್ವಯಂಸೇವಕರು ಅಭಿಯಾನದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು. ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ ಕೋಟೆಕಾರ್ ಕಾರ್ಯಕ್ರಮದ ನೇತೃತ್ವ ವಹಿಸಿ, ಮುನ್ನಡೆಸಿದರು. ಅಭಿಯಾನದ ಬಳಿಕ
ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಅಭಿಯಾನಕ್ಕೆ ಎಂಆರ್‌ಪಿಎಲ್ ಹಾಗೂ ನಿಟ್ಟೆ ಸಂಸ್ಥೆ ಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.
ಬಸ್ ತಂಗುದಾಣಗಳ ಸ್ವಚ್ಛತೆ
ಪ್ರಯಾಣಿಕರು ನಿತ್ಯ ಉಪಯೋಗಿಸುವ ಕುಲಶೇಖರ- ಶಕ್ತಿನಗರ ಕ್ರಾಸ್‌ನಲ್ಲಿರುವ ಎರಡು ಬಸ್ ತಂಗುದಾಣಗಳಗೆ ಅನಧಿಕೃತವಾಗಿ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು ಹಾಗೂ ಸುಣ್ಣ ಬಣ್ಣವೂ ಮಾಸಿತ್ತು. ಇದನ್ನು ಗಮನಿಸಿದ ಸ್ವತ್ಛ ಮಂಗಳೂರು ಕಾರ್ಯಕರ್ತರು ಉದಯ ಕೆ.ಪಿ., ಆನಂದ ಅಡ್ಯಾರ್ ಮಾರ್ಗದರ್ಶನದಲ್ಲಿ ಪೋಸ್ಟರ್‌ಗಳನ್ನು ತೆಗೆದು, ನೀರಿನಿಂದ ತೊಳೆದು ಶುಚಿಗೊಳಿಸಿದರು. ಅನಂತರ ಸುಣ್ಣ-ಬಣ್ಣ ಬಳಿದು ಅಂದಗೊಳಿಸಿದರು.