ವಿವೇಕಾನಂದ ಕಾಲೇಜಿನಲ್ಲಿ ‘ವಾಣಿಜ್ಯ ಸಂಘ’ದ ಉದ್ಘಾಟನೆ, ಶಿಕ್ಷಣದ ಜೊತೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯ ; ಮಹೇಶ್ ನಿಟಿಲಾಪುರ-ಕಹಳೆ ನ್ಯೂಸ್
ಪುತ್ತೂರು : ಒಂದು ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದಾರೆ ಎಂಬುದರ ಮೇಲೆ ವಿದ್ಯಾರ್ಥಿಗಳ ಮುಂದಿನ ಜೀವನದ ಬೆಳವಣಿಗೆ ನಿಂತಿದೆ. ಕಾಲೇಜಿನಲ್ಲಿ ಸಿಗುವಂತಹ ಎಲ್ಲಾ ರೀತಿಯ ಪಠ್ಯೇತರ ಅವಕಾಶವನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಹೇಳಿದರು.
ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಐಕ್ಯೂಎಸಿ ಘಟಕ ಮತ್ತು ವಾಣಿಜ್ಯ ವಿಭಾಗದಿಂದ ಆಯೋಜಿಸಲಾಗಿದ್ದ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಉದ್ಘಾಟಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸ್ತುತ ಕಾಮರ್ಸ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವಕಾಶಗಳು ಲಭಿಸುತ್ತಿದೆ. ಈ ನಿಟ್ಟಿನಲ್ಲಿ ಉದ್ಯೋಗಕ್ಕೆ ಪೂರಕವಾಗಿ ಅಗತ್ಯವಿರುವಂತಹ ಚಟುವಟಿಕೆಗಳಲ್ಲಿ ಕಾಲೇಜು ಹಂತದಿಂದಲೇ ತೊಡಗಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಇದು ಅವರ ಮುಂದಿನ ಉದ್ಯೋಗ ಜೀವನಕ್ಕೆ ಸಹಾಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕಿ ರವಿಕಲಾ ಮಾತನಾಡಿ, ಪೋಷಕರು ಮತ್ತು ಶಿಕ್ಷಕರು ಕೊಡುವಂತಹ ಮೌಲ್ಯಯುತವಾದ ಶಿಕ್ಷಣವೇ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಉಡುಗೊರೆಯಾಗಿದೆ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು, ಜೀವನ ಕಟ್ಟಿಕೊಳ್ಳಬೇಕು. ವಿದ್ಯಾರ್ಥಿಯು ಜೀವನದಲ್ಲಿ ಸವಾಲುಗಾರನಾಗಿರಬೇಕು. ನಿಮಗೆ ನೀವೇ ಆದರ್ಶ ವ್ಯಕ್ತಿತ್ವದವರಾಗಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ನಮ್ಮಲ್ಲಿರುವ ಶಕ್ತಿಯನ್ನು ನಾವೇ ಹೊರತರಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮುಜುಗರ ಮತ್ತು ಭಯವನ್ನು ಹೋಗಲಾಡಿಸಬೇಕು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ವೇದಿಕೆಯಲ್ಲಿ ವಾಣಿಜ್ಯ ಸಂಘದ ಸಂಯೋಜಕ ಗೌತಮ್ ಪೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಕ್ಷತಾ ಮತ್ತು ಬಳಗ ಪ್ರಾರ್ಥಿಸಿದರು. ವಾಣಿಜ್ಯ ಸಂಘದ ಅದ್ಯಕ್ಷೆ ಸ್ವರ್ಣಲಕ್ಷೀ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಸುಶಾಂತ್ ವಂದಿಸಿದರು. ವಿದ್ಯಾರ್ಥಿನಿ ಆಕಾಂಕ್ಷ ಎಚ್. ಕಾರ್ಯಕ್ರಮವನ್ನು ನಿರೂಪಿಸಿದರು.