Monday, January 20, 2025
ಪುತ್ತೂರು

ಅಂಬಿಕಾ ಕಾಲೇಜಿನಲ್ಲಿ ‘ಮನಸ್ಸು ಮತ್ತು ಮಾನಸಿಕತೆ’ ವಿಷಯದ ಕುರಿತಾಗಿ ಉಪನ್ಯಾಸ, ಭಗವದ್ಗೀತೆ ಪ್ರಪಂಚದ ಅತ್ಯಂತ ದೊಡ್ಡ ಮನಃಶಾಸ್ತ್ರ ; ಚಂದ್ರಕಾಂತ್ ಗೋರೆ-ಕಹಳೆ ನ್ಯೂಸ್

ಪುತ್ತೂರು : ಭಗವದ್ಗೀತೆ ಜಗತ್ತಿನ ಅತ್ಯಂತ ದೊಡ್ಡ ಮನಃಶಾಸ್ತ್ರ. ಆದರೆ ಈ ಬಗೆಗೆ ನಮಗೆ ಅರಿವಿಲ್ಲ. ಹಾಗಾಗಿ ವಿದೇಶೀಯರನ್ನೇ ಮನಃಶಾಸ್ತ್ರದ ಮೂಲ ಪುರುಷರಾಗಿ ಗುರುತಿಸುತ್ತಿದ್ದೇವೆ. ಮನಃಶಾಸ್ತ್ರದ ನಿಜವಾದ ಆಚಾರ್ಯ ಪುರುಷ ಭಗವಾನ್ ಶ್ರೀಕೃಷ್ಣ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ್ ಗೋರೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಮನ:ಶಾಸ್ತ್ರ ವಿಭಾಗ ಹಾಗೂ ಐಕ್ಯುಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಮನಸ್ಸು ಮತ್ತು ಮಾನಸಿಕತೆ’ ಎಂಬ ವಿಷಯದ ಕುರಿತಾಗಿ ಗುರುವಾರ ಮಾತನಾಡಿದರು. ಈವತ್ತು ಸಮಾಜದಲ್ಲಿ ಎಲ್ಲ ಸಂಗತಿ, ವಸ್ತುಗಳ ಬಗೆಗೆ ಅಧ್ಯಯನ ನಡೆಯುತ್ತದೆ. ಆದರೆ ಮನುಷ್ಯನ ಬಗೆಗಿನ ಅಧ್ಯಯನ ಪ್ರಬಲವಾಗಿಲ್ಲ. ಮನುಷ್ಯನ ವರ್ತನೆ ಪದೇ ಪದೆ ಬದಲಾಗುತ್ತಲೇ ಇರುತ್ತದೆ. ಉಳಿದೆಲ್ಲಾ ಪ್ರಾಣಿಗಳಿಗೆ ಸಂತೋಷವಾದಾಗ, ಸಿಟ್ಟು ಬಂದಾಗ ಅತ್ಯಂತ ಸುಲಭವಾಗಿ ಗುರುತಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಮನುಷ್ಯ ಸಿಟ್ಟಿನಲ್ಲಿದ್ದರೂ ಸಂತೋಷವಾಗಿದ್ದಂತೆ, ಸಂತೋಷದಲ್ಲಿದ್ದರೂ ದುಃಖದಲ್ಲಿದ್ದಂತೆ ಬಿಂಬಿಸಿಕೊಳ್ಳಬಲ್ಲ. ಹಾಗಾಗಿ ಮನುಷ್ಯನ ಕುರಿತಾದ ಅಧ್ಯಯನ ಅತ್ಯಂತ ಅಗತ್ಯ ಮತ್ತು ಸವಾಲಿನದ್ದು ಎಂದು ಅಭಿಪ್ರಾಯಪಟ್ಟರು. ಮನಃಶಾಸ್ತ್ರಜ್ಞರಾಗುವವರಿಗೆ ತಾಳ್ಮೆ ಅತ್ಯಂತ ಮುಖ್ಯವಾದದ್ದು. ಮನುಷ್ಯರ ಮನಃಪರಿವರ್ತನೆ ಮಾಡುವ ಬಹುದೊಡ್ಡ ಜವಾಬ್ಧಾರಿ ಮನಃಶಾಸ್ತ್ರಜ್ಞರ ಮೇಲಿದೆ. ಅದರಲ್ಲೂ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಮನಸ್ಸುಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯದ ವಿಚಾರ. ಕಾಲೇಜುಗಳಲ್ಲಿ ಮನಃಶಾಸ್ತ್ರ ವಿಭಾಗಗಳ ಅವಶ್ಯಕತೆ ಇದೆ ಎಂದರಲ್ಲದೆ ವ್ಯಕ್ತಿ ಬಾಯಿಮಾತಿನಲ್ಲಿ ಸುಳ್ಳು ಹೇಳಬಹುದು. ಆದರೆ ದೇಹಭಾಷೆ ಸತ್ಯವನ್ನೇ ಪ್ರದಶಿಸುತ್ತದೆ. ಅದನ್ನು ಅರಿತು ವ್ಯವಹರಿಸಿದಾಗ ಉತ್ತಮ ಮನಃಶಾಸ್ತ್ರಜ್ಞರಾಗಲು ಸಾಧ್ಯ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ಮನೋವಿಜ್ಞಾನ ಎಂಬುದು ನಮ್ಮ ಜೀವನಪದ್ಧತಿಗೆ ಅತ್ಯಂತ ಸನಿಹವಾದದ್ದು. ಇಂದು ಸಾಮಾಜಿಕ ಮಾಧ್ಯಮಗಳಂತಹ ವೇದಿಕೆಯಿಂದಾಗಿ ಮನುಷ್ಯನ ಮನಸ್ಸಿನ ಮೇಲೆ ಬಹುದೊಡ್ಡ ಪರಿಣಾಮಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮನಃಶಾಸ್ತ್ರ ಅತ್ಯಂತ ಅಗತ್ಯವೆನಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಿಗಬೇಕಾದ ಕಾಲದಲ್ಲಿ ಅತ್ಯುತ್ತಮ ಮಾರ್ಗದರ್ಶನ ದೊರಕಿದರೆ ಯಾವ ವ್ಯಕ್ತಿ ಕೂಡ ಸಮಾಜಕ್ಕೆ ಉಪಯುಕ್ತನೆನಿಸಬಲ್ಲ. ಆದರೆ ಅಂತಹ ಮಾರ್ಗದರ್ಶನದ ಕೊರತೆಯಾದಾಗ ವ್ಯಕ್ತಿ ಹಾದಿತಪ್ಪುವ ಸಾಧ್ಯತೆ ಇರುತ್ತದೆ. ಇಂದು ನಾವು ಕೆಟ್ಟವರೆಂದು ಯಾರನ್ನು ಗುರುತಿಸುತ್ತೇವೋ ಅವರೆಲ್ಲರೂ ಮಾರ್ಗದರ್ಶನದ ಕೊರತೆಯಿಂದ ಹಾಗಾಗಿದ್ದಾರೆ ಎಂಬುದು ಗಮನಾರ್ಹ ಎಂದು ತಿಳಿಸಿದರು. ಸಮಾಜಕ್ಕಿಂದು ಮನಃಶಾಸ್ತ್ರಜ್ಞರು ಬೇಕಾಗಿದ್ದಾರೆ. ಎಲ್‍ಕೆಜಿ ಮಕ್ಕಳಿಂದ ತೊಡಗಿದಂತೆ ಆಪ್ತಸಮಾಲೋಚನೆ ನಡೆಸಬೇಕಾದ ಅವಶ್ಯಕತೆ ಇದೆ. ಅದರಲ್ಲೂ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವ ಇಂದಿನ ಸಮಾಜದಲ್ಲಿ ಮನೋಬಲವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವಂತಹ ಮನಃಶಾಸ್ತ್ರಜ್ಞರು ಹೆಚ್ಚಬೇಕಿದ್ದಾರೆ ಎಂದರಲ್ಲದೆ ವಿದ್ಯಾರ್ಥಿಗಳಲ್ಲಿ ನೈತಿಕತೆ ಹೆಚ್ಚಬೇಕಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಕ್ಷಯ್ ಹೆಗಡೆ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪ್ರಿಯಾ ಪ್ರಾರ್ಥಿಸಿ, ಪ್ರಕೃತಿ ಸ್ವಾಗತಿಸಿ, ವೈಷ್ಣವೀ ಜೆ ರಾವ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಮೋಹನ್ ವಂದಿಸಿ, ವಿದ್ಯಾರ್ಥಿನಿ ಸಾಯಿಶ್ವೇತ ಕಾಯ್ಕ್ರಮ ನಿರ್ವಹಿಸಿದರು.