ಪುತ್ತೂರು : ಒಬ್ಬ ಸ್ನೇಹಿತ ಒಂದು ಗ್ರಂಥಕ್ಕೆ ಸಮಾನ ಎಂಬ ಮಾತಿದೆ. ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರನ್ನು ಆಯ್ಕೆ ಮಾಡುವ ಅವಕಾಶಗಳು ಇರುತ್ತವೆ.
ಆಗ ಒಳ್ಳೆಯ ಸ್ನೇಹಿತನನ್ನು ಆಯ್ಕೆ ಮಾಡಿಕೊಂಡರೆ, ನಮ್ಮಲ್ಲಿರುವ ಕೌಶಲ್ಯದ ಜೊತೆ ಜೊತೆಗೆ ನಾವು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾ ಜೆ. ರಾವ್ ಹೇಳಿದರು. ಅವರು ಕಾಲೇಜಿನ ಐಕ್ಯುಎಸಿ ಘಟಕ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ ‘ಮಣಿಕರ್ಣಿಕ ಮಾತುಗಾರರ ವೇದಿಕೆ’ಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ, ಗುರುವಾರ ಮಾತನಾಡಿದರು. ಜೀವನದಲ್ಲಿ ಮೂರು ವ್ಯಕ್ತಿಗಳನ್ನು ಯಾವತ್ತಿಗೂ ಮರೆಯಬಾರದು. ಯಾರೆಂದರೆ, ನಮ್ಮನ್ನು ಕಷ್ಟಕ್ಕೆ ಸಿಲುಕಿಸಿದವರು, ಕಷ್ಟದ ಸಮಯದಲ್ಲಿ ಕೈ ಬಿಟ್ಟವರು, ಮತ್ತು ಕಷ್ಟದ ಸಮಯದಲ್ಲಿ ನಮ್ಮ ಜೊತೆ ಇದ್ದವರು. ಇವರನ್ನು ನೆನಪಿಸಿಕೊಂಡರೆ ಜೀವನದಲ್ಲಿ ಒಳ್ಳೆಯ ಸ್ನೇಹಿತನನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ‘ಮುಳುಗದ ಶಿಪ್ ಅಂದರೆ ಅದು ಫ್ರೆಂಡ್ ಶಿಪ್’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಾದ ತನುಶ್ರೀ, ಅರಹಂತ್ ಜೈನ್, ಶುಭ್ರ ಪುತ್ರಕಳ, ಶ್ರೀಜೇಶ್, ಕೃತಿಕಾ, ಕಾರ್ತಿಕ್ ಪೈ, ಕೃತಿ, ಚರಿಷ್ಮಾ, ಶ್ವೇತ, ಸಿಂಧೂ, ಧನ್ಯ, ಸಂದೀಪ್, ವಿನಿತಾ, ಮಂಜುನಾಥ ಮತ್ತು ಶ್ರೀರಾಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಹಾಗೂ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಸೌಜನ್ಯ ಬಿ.ಎಂ. ಉಪಸ್ಥಿತರಿದ್ದರು. ಪ್ರಥಮ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿ ಮಂಜುನಾಥ ಮತ್ತು ಶುಭ್ರ ಪುತ್ರಕಳ ವಾರದ ಮಾತುಗಾರರಾಗಿ ಹಾಗೂ ದ್ವಿತೀಯ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಮಾತುಗಾರರ ತಂಡವಾಗಿ ಬಹುಮಾನ ಪಡೆದುಕೊಂಡರು. ತೃತೀಯ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿನಿ ದೀಪ್ತಿ ಎಚ್. ಸ್ವಾಗತಿಸಿ, ವಿದ್ಯಾರ್ಥಿ ಪ್ರಚೇತ್ ಆಳ್ವ ವಂದಿಸಿದರು. ವಿದ್ಯಾರ್ಥಿನಿ ಕವಿತಾ ಎಂ.ಎಲ್. ಕಾರ್ಯಕ್ರಮವನ್ನು ನಿರೂಪಿಸಿದರು.