ಪುತ್ತೂರು : ಸಮಾಜದ ಏಳಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಮಹತ್ತರವಾದುದು. ಶಿಕ್ಷಕರು ಪ್ರಾಮಾಣಿಕತೆ, ಬದ್ಧತೆ, ಕ್ರಿಯಾಶೀಲತೆ ಮತ್ತು ಸಹಕಾರ ಮನೋಭಾವನೆಯಿಂದ ಕಾರ್ಯ ನಿರ್ವಹಿಸುವುದು ಬಹಳ ಮುಖ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನಸ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗವು ಫೆಬ್ರವರಿ 10 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಹಮ್ಮಿಕೊಂಡ ಸಾಧಕರನ್ನು ಸಮ್ಮಾನಿಸುವ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಅಧ್ಯಯನವೆಂಬುದು ಒಂದು ನಿರಂತರ ಪ್ರಕ್ರಿಯೆ. ಶೈಕ್ಷಣಿಕ ಸಾಧನೆಗೆ ಶಿಸ್ತು, ಪರಿಶ್ರಮ ಮತ್ತು ನಿರಂತರ ಅಭ್ಯಾಸ ಬಹಳ ಅಗತ್ಯ. ಜೀವನದಲ್ಲಿ ಪ್ರತಿಯೊಬ್ಬರೂ ಶ್ರೇಷ್ಠ ಮಟ್ಟದ ಸಾಧನೆಯನ್ನು ಮಾಡುವ ಧ್ಯೇಯವನ್ನು ಹೊಂದಿರಬೇಕು. ಶಿಕ್ಷಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ನೀಡಬಲ್ಲುದು ಎಂದು ಹೇಳಿ, ಪಿಎಚ್‍ಡಿಗಳಿಸಿದ ಪ್ರಾಧ್ಯಾಪಕರು, ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಮಂಗಳೂರು ವಿವಿ ಮಟ್ಟದ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿವಿಯ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ ಬಿ ವಿಜಯಕುಮಾರ್ ಮಾತನಾಡಿ, ಸ್ನಾತಕೋತ್ತರ ಅಧ್ಯಯನನ ವಿಭಾಗಗಳು ಶಿಕ್ಷಣ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸುತ್ತವೆ. ನಮ್ಮ ಸಾಧನೆಯಲ್ಲಿ ಬುದ್ಧಿಶಕ್ತಿಗಿಂತಲೂ ಪ್ರಾಮಾಣಿಕ ಮತ್ತು ಸತತ ಪ್ರಯತ್ನ ಬಹು ಮುಖ್ಯ ಪಾತ್ರವಹಿಸುತ್ತದೆ. ಸಾಧನೆಯ ಪಥದಲ್ಲಿ ಸವಾಲುಗಳು ಎದುರಾಗುವುದು ಸರ್ವೇ ಸಾಮಾನ್ಯ. ಅವುಗಳನ್ನು ಧನಾತ್ಮಕ ಚಿಂತನೆಯೊಂದಿಗೆ ಎದುರಿಸಬೇಕು. ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗವು ಈಗಾಗಲೇ ಬಹಳಷ್ಟು ಸಾಧನೆಯನ್ನು ಮಾಡಿ, ಮೆಚ್ಚುಗೆಯನ್ನು ಗಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರ ಹಮ್ಮಿಕೊಳ್ಳುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯದ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಇಲ್ಲಿ ಅಧ್ಯಯನ ಗೈಯುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಹತ್ತರ ಸಾಧನೆಯನ್ನು ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ಕಳೆದ ನಾಲ್ಕೈದು ವರ್ಷಗಳಲ್ಲಿ ಸ್ನಾತಕೋತ್ತರ ಅಧ್ಯಯನದೊಂದಿಗೆ ಕೆಸೆಟ್ ಪರೀಕ್ಷೆಗಳಲ್ಲಿಯೂ ತೇರ್ಗಡೆ ಹೊಂದುತ್ತಿರುವುದು ಇಲ್ಲಿಯ ವಿದ್ಯಾರ್ಥಿಗಳ ಸಾಧನೆಯನ್ನು ಪ್ರತಿ ಬಿಂಬಿಸುತ್ತದೆ ಎಂದರು. ಈ ಸಂದರ್ಭದಲ್ಲಿ ವಂ. ವಿಜಯ್ ಲೋಬೊ, ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮತ್ತು ಡಾ. ಎ ಪಿ ರಾಧಾಕೃಷ್ಣ ಶೈಕ್ಷಣಿಕ ಸಾಧಕರನ್ನು ಅಭಿನಂದಿಸಿದರು. ವಿಭಾಗದ ಸಂಯೋಜಕರಾದ ಡಾ. ಇ ದೀಪಕ್ ಡಿ’ಸಿಲ್ವ ಸಾಧಕರನ್ನು ಪರಿಚಯಿಸಿದರು. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯಲ್ಲಿ ಪಿಎಚ್‍ಡಿ ಪದವಿ ಗಳಿಸಿದ ಡಾ. ಪ್ರವೀಣ್ ಪ್ರಕಾಶ್ ಡಿ’ಸೋಜ, ಮಣಿಪಾಲದ ಮಾಹೆಯಲ್ಲಿ ಪಿಎಚ್‍ಡಿ ಪದವಿ ಗಳಿಸಿದ ಡಾ. ಆಶಿತ್ ವಿ ಕೆ, ಮಂಗಳೂರು ವಿವಿ ಮಟ್ಟದ ಪರೀಕ್ಷೆಯಲ್ಲಿ ಇಲೆಕ್ಟ್ರೋನಿಕ್ಸ್ ಐಚ್ಛಿಕ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ, ವಿಶೇಷ ಪುರಸ್ಕಾರಗಳಿಗೆ ಪುರಸ್ಕøತರಾದ ಅಕ್ಷತಾ ಕೆ ಎನ್, ಉಪನ್ಯಾಸಕ ಅರ್ಹತಾ ಪರೀಕ್ಷೆ (ಕೆಸೆಟ್)ಯಲ್ಲಿ ಉತ್ತೀರ್ಣರಾದ ಸಿಂಧೂ ಡಿ ಜಿ, ರಮ್ಯಶ್ರೀ, ಆಶ್ನಾ ಪಿ ವಿ ಮತ್ತು ತುಷಾರ ಆರ್ ಬಿ ಇವರನ್ನು ಸನ್ಮಾನಿಸಲಾಯಿತು.