ಪದವೀಧರರಾದ ತಕ್ಷಣ ನೀವು ಎಲ್ಲವನ್ನೂ ಕಲಿತಂತಾಗಲಿಲ್ಲ ಬದಲಾಗಿ ಜೀವನದ ಪಾಠವನ್ನು ಇನ್ನು ಕಲಿಯಬೇಕಾಗಿದೆ ; ಡಾ.ಬಿ.ರಾಮಚಂದ್ರ ಭಟ್-ಕಹಳೆ ನ್ಯೂಸ್
ಪುತ್ತೂರು : ಪದವೀಧರರಾದ ತಕ್ಷಣ ನೀವು ಎಲ್ಲವನ್ನೂ ಕಲಿತಂತಾಗಲಿಲ್ಲ ಬದಲಾಗಿ ಜೀವನದ ಪಾಠವನ್ನು ಇನ್ನು ಕಲಿಯಬೇಕಾಗಿದೆ ಎಂದು ಎನ್‍ಐಟಿಕೆ ಸುರತ್ಕಲ್‍ನ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ.ಬಿ.ರಾಮಚಂದ್ರ ಭಟ್ ಹೇಳಿದರು ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕೇಶವ ಸಂಕಲ್ಪ ಸಬಾಭವನದಲ್ಲಿ ನಡೆದ 2019-20 ನೇ ಸಾಲಿನಲ್ಲಿ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಕಲಿಕೆಯಿಂದ ಸೃಜನಶೀಲತೆ, ಸೃಜನಶೀಲತೆಯಿಂದ ಆಲೋಚನೆಗಳು, ಆಲೋಚನೆಗಳಿಂದ ಜ್ಞಾನ ದೊರೆಯುತ್ತದೆ. ಜ್ಞಾನವು ನಮ್ಮ ಬದುಕನ್ನು ಮುನ್ನಡೆಸುತ್ತದೆ ಎಂದು ಹೇಳಿದರು. ತನ್ನ ಜೀವನಾನುಭವವನ್ನು ಪದವೀಧರರೊಂದಿಗೆ ಹಂಚಿಕೊಂಡ ಅವರು ತಾನು ಚಿಕ್ಕಂದಿನಲ್ಲಿ ನಿಗದಿಪಡಿಸಿಕೊಂಡ ಗುರಿಯನ್ನು ಸಾಧಿಸಿದಾಗ ಸಿಗುವ ಆನಂದ ಅವರ್ಣನೀಯ ಎಂದರು. ಸಾಧಕನಿಗೆ ಕೊನೆ ಎಂಬುದಿಲ್ಲ. ಆಕಾಶದೆತ್ತರದವರೆಗೂ ಅವಕಾಶಗಳಿವೆ ಅದನ್ನು ಬಳಸಿಕೊಳ್ಳುವ ಛಾತಿ ನಮ್ಮಲ್ಲಿರಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶ್ರೀ.ಬಲರಾಮ ಆಚಾರ್ಯ.ಜಿ. ಮಾತನಾಡಿ ಪದವಿಯನ್ನು ಪೂರೈಸಿ ನೀವು ಸಾಧ್ಯತೆಗಳ ಪ್ರಪಂಚಕ್ಕೆ ಕಾಲಿರಿಸಿದ್ದೀರಿ. ಇಲ್ಲಿ ಅಪಾರ ಅವಕಾಶಗಳು ಲಭ್ಯವಿವೆ ಅವನ್ನು ಬಾಚಿಕೊಳ್ಳಬೇಕು ಎಂದು ಹೇಳಿದರು. ಕೊರೋನೋತ್ತರದ ದಿನಗಳಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಉದ್ಯೋಗ ಹುಡುಕುವ ಬದಲಿಗೆ ಉದ್ಯೋಗದಾತರಾಗುವ ಮನಮಾಡಬೇಕು ಎಂದರು. ಸಮಾಜದಿಂದ ಉಪಕೃತರಾದ ನಾವು ಸಮಾಜಕ್ಕೆ ನಮ್ಮಿಂದಾದ ಸೇವೆ ಸಲ್ಲಿಸದೇ ಹೋದರೆ ನಮ್ಮ ವ್ಯಕ್ತಿತ್ವಕ್ಕೆ ಘನೆತೆಯಿಲ್ಲ ಎಂದರು. ತಾವು ಕಲಿತ ಸಂಸ್ಥೆಯ ಬಗ್ಗೆ ಉತ್ತಮ ವಿಷಯಗಳನ್ನು ಪಸರಿಸಿ ಸಂಸ್ಥೆಯ ಉನ್ನತಿಗೆ ಸಹಕಾರವನ್ನು ನೀಡಬೇಕೆಂದು ಕರೆನೀಡಿದರು. ಪ್ರತಿ ವಿಭಾಗದಲ್ಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 2019-20ನೇ ಸಾಲಿನಲ್ಲಿ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಪಿ., ಸಂಚಾಲಕ ಶ್ರೀ.ರಾಧಾಕೃಷ್ಣ ಭಕ್ತ, ಕೋಶಾಧಿಕಾರಿ ಶ್ರೀ.ಮುರಳೀಧರ ಭಟ್, ನಿರ್ದೇಶಕರಾದ ರವಿಕೃಷ್ಣ.ಡಿ. ಕಲ್ಲಾಜೆ, ಕಾಲೇಜು ಸಲಹಾ ಸಮಿತಿಯ ಸದಸ್ಯರಾದ ಪದ್ಮಶ್ರೀ ಗಿರೀಶ್ ಭಾರದ್ವಾಜ್, ಶ್ರೀ ರಾಮ್ ಕುಮಾರ್ ಹಾಗೂ ವಿವಿದ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪೇರೆಂಟ್ ರಿಲೇಶನ್ ಸೆಲ್‍ನ ಕಾರ್ಯದರ್ಶಿ ಶ್ರೀಮತಿ ಶಶಿಕಲಾ, ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಸಮಾರಂಭದಲ್ಲಿ ಹಾಜರಿದ್ದರು. ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ. ಸ್ವಾಗತಿಸಿ ಪ್ರಸ್ತಾವನೆಗೈದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ಚೇತನ್.ಪಿ.ಡಿ ವಂದಿಸಿದರು. ಪ್ರೊ. ಪ್ರಭಾ.ಜಿ.ಎಸ್ ಮತ್ತು ಪ್ರೊ. ಭಾನುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.