
ಹೈದರಾಬಾದ್: ತೆಲಂಗಾಣದ ಜಗಿತ್ತಲಾ ಜಿಲ್ಲೆಯ ಮೇದಪಲ್ಲಿಯ ಎಸ್‌ಆರ್‌ಎಸ್‌ಸಿ ಕಾಕತೀಯ ಕಾಲುವೆಯಲ್ಲಿ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಕಾರು ಕಾಲುವೆಗೆ ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಲಾಯರ್ ಅಮರೇಂದ್ರ ಕುಟುಂಬ ಜಗಿತ್ತಲ ಬಿಟ್ಟು ಸೊಂಟೂರು ಜೊಗಿನಿಪಲ್ಲಿಗೆ ಹಬ್ಬಕ್ಕೆಂದು ತೆರಳಿದ್ದರು. ಮೇದಪಲ್ಲಿ ತಲುಪುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಕಾರು ಕಾಲುವೆಗೆ ಬಿದ್ದಿದೆ. ಕಾರು ಓಡಿಸುತ್ತಿದ್ದ ಜಯಂತ್ ಬಾಗಿಲು ತೆರೆದು ಹೊರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ, ಉಳಿದ ಮೂವರು ಕಾರಿನಲ್ಲಿ ಸಿಲುಕಿಕೊಂಡಿದ್ದರು. ನೀರಿನ ಸೆಳೆತಕ್ಕೆ ಸಿಲುಕಿದ ಕಾರು ಕೆಲ ದೂರದವರೆಗೆ ಕೊಚ್ಚಿ ಹೋಗಿದೆ. ಇದನ್ನೂ ನೋಡಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮುನ್ನವೇ ಮೂವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಕೊರುಟ್ಲಾ ವಲಯದ ಜೋಗಿನಿಪಲ್ಲಿ ಮೂಲದ ವಕೀಲ ಅಮರೇಂದ್ರ ರಾವ್, ಪತ್ನಿ ಸಿರಿಷಾ, ಮಗಳು ಶ್ರೇಯಾ ಮೃತದುರ್ದೈವಿಗಳು. ಮೃತದೇಹಗಳನ್ನು ಜಗಿತ್ತಲ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಮರೇಂದ್ರ ಮಗಳು ಶ್ರೇಯಾ ಕೆಲ ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದು, ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇತ್ತು. ಅಷ್ಟರಲ್ಲೇ ದುರ್ಘಟನೆ ನಡೆದಿದೆ. ಮುಂಜಾನೆ ಆಗಿದ್ದರಿಂದ ನಿದ್ರೆಗೆ ಜಾರಿದ್ದೆ ಕಾರು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ತನಿಖೆ ನಡೆಯುತ್ತಿದೆ.