ಮಂಗಳೂರು : ಕೋವಿಡ್-19 ಲಸಿಕೆಯನ್ನು ಈಗಾಗಲೇ ಮೊದಲನೆಯ ಹಂತದಲ್ಲಿ, ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ನೋಂದಾವಣೆಗೊಂಡ ಖಾಸಗಿ ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಡೆದಿರುತ್ತಾರೆ.
ಈಗಾಗಲೇ ನೋಂದಣಿಗೊಂಡು ಬಾಕಿ ಉಳಿದ ಸಿಬ್ಬಂದಿಯವರು ಲಸಿಕೆಯನ್ನು ಪಡೆಯಲು ಫೆಬ್ರವರಿ 25 ರವರೆಗೆ ಕಾಲಾವಕಾಶ ನೀಡಲಾಗಿದೆ. ಹೆಲ್ತ್‍ಕೇರ್ ವರ್ಕರ್ಸ್‍ನ ಎರಡನೇ ಹಂತದ ಲಸಿಕೆಯನ್ನು ಫೆಬ್ರವರಿ 15 ರಿಂದ ಆರಂಭಿಸಲಾಗಿದ್ದು, ಮೊದಲನೇಯ ಹಂತದಲ್ಲಿ ಲಸಿಕೆಯನ್ನು ಪಡೆದ ಎಲ್ಲಾ ಫಲಾನುಭವಿಗಳು ಎರಡನೇ ಹಂತದ ಲಸಿಕೆಯನ್ನು ಪಡೆಯಬಹುದಾಗಿದೆ. ಫ್ರೆಂಟ್‍ಲೈನ್ ವರ್ಕರ್ಸ್ ಗೆ ಕೋವಿಡ್ ಲಸಿಕೆಯನ್ನು ಪಡೆಯಲು ಈಗಾಗಲೇ ಚಾಲನೆ ದೊರಕಿದ್ದು, ಲಸಿಕೆ ಪಡೆಯಲು ಬಾಕಿ ಉಳಿದಿರುವ ಫಲಾನುಭವಿಗಳು ಫೆಬ್ರವರಿ 17 ರೊಳಗೆ ನೋಂದಣಿ ಮಾಡಬಹುದಾಗಿದೆ. ಹಾಗೂ ಇವರಿಗೆ ಮಾರ್ಚ್ 06 ರವರೆಗೆ ಲಸಿಕೆಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲಾ ಫಲಾನುಭವಿಗಳು ಲಸಿಕೆಯನ್ನು ತಾಲೂಕುಗಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಎಲ್ಲಾ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಪಡೆಯಬಹುದು. ಒಂದು ವೇಳೆ ಲಸಿಕೆ ಪಡೆಯುವ ಬಗ್ಗೆ ಎಸ್‍ಎಂಎಸ್ ಬಾರದಿದ್ದರೂ, ಹತ್ತಿರದ ಲಸಿಕಾ ಕೇಂದ್ರದಲ್ಲಿ ಲಸಿಕೆಯನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.