ಕೈರಂಗಳ ಗೋ ಶಾಲೆಯಿಂದ ಹಸುಗಳನ್ನು ಕದ್ದೊಯ್ದ ಪ್ರಕರಣ ; ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಎಚ್ಚರಿಕೆ – ಹಿಂಜಾವೇ
ಪುತ್ತೂರು: ಕೈರಂಗಳ ಪುಣ್ಯ ಕೋಟಿನಗರದ ಅಮೃತಧಾರ ಗೋ ಶಾಲೆಯಿಂದ ಹಸುಗಳನ್ನು ದರೋಡೆ ಮಾಡಿದ ಆರೋಪಿಗಳನ್ನು ಇನ್ನೆರಡು ದಿವಸಗಳೊಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಸಂವಿಧಾನಾತ್ಮಕವಾಗಿ ನೂರಾರು ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಗೋ ಕಳವು ನಿರಂತರವಾಗಿ ನಡೆಯುತ್ತಿದೆ. ಆರಂಭದ ಹಂತದಲ್ಲಿ ಮೇವಿಗೆ ಗುಡ್ಡಕ್ಕೆ ಬಿಟ್ಟ ಗೋವನ್ನು ಕದಿಯುತ್ತಿದ್ದ ಗೋ ಕಳ್ಳರು ಹಿತ್ತಲಲ್ಲಿ ಕಟ್ಟಿದ ಗೋವನ್ನು ಕದೊಯುತ್ತಿದ್ದರು. ಬಳಿಕ ಹಟ್ಟಿಯಿಂದಲೂ ರಾತ್ರಿ ಹೊತ್ತು ಕಳವು ಮಾಡಲಾಗುತ್ತಿತ್ತು. ಕಳೆದ 2 ವರ್ಷಗಳಿಂದ ಮನೆ ಮನೆಗಳ ಹಟ್ಟಿಗಳಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಗೋವನ್ನು ದರೋಡೆ ಮಾಡುವ ಹಂತಕ್ಕೆ ಬಂದಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ಪಾತಕಿಗಳ ಪತ್ತೆ ಆಗುತ್ತಿಲ್ಲ. ಕೈರಂಗಳದ ಆಸುಪಾಸಿನ ಮನೆಗಳಿಂದ ಜೀವನಾಧರಕ್ಕೆ ಸಾಕುತ್ತಿದ್ದ ಸುಮಾರು 75ಕ್ಕಿಂತ ಹೆಚ್ಚು ಹಸುಗಳು ಕಳವಾಗಿದೆ. ಒಬ್ಬನೆ ಒಬ್ಬ ಕಳ್ಳ ಪತ್ತೆಯಾಗಿಲ್ಲ. ಇತ್ತೀಚಿಗಿನ ವರ್ಷಗಳಲ್ಲಿ ವ್ಯಾಪಕವಾಗಿ ಗೋ ಕಳ್ಳತನ, ಅಕ್ರಮ ಗೋಸಾಗಾಟ, ದರೋಡೆ ನಡೆಯುತ್ತಿದೆ. ಲವ್‍ಜಿಹಾದ್, ಮತಾಂತರ, ಕೋಮು ಸಂಘಷಘಳ ಮೂಲಕ ಕರಾವಳಿಯ ಶಾಂತಿ ಕೆಡಿಸಿದ ಪ್ರಕರಣಗಳು ಈಗಾಗಲೇ ನಮ್ಮ ಕಣ್ಣುಮುಂದಿರುವಾಗ ಗೋ ಕಳ್ಳಸಾಗಾಟ, ಕಳ್ಳತನ, ದರೋಡೆ, ಹತ್ಯೆಗಳು ಈ ಪ್ರಕ್ಷುಬ್ದತೆಯ ಕೋಮು ದ್ವೇಷದ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದ ಅವರು ಚುನಾವಣೆ ಗೋಷಣೆಯಾಗಿರುವ ಈ ಹೊತ್ತಿನಲ್ಲಿ ಸರಕಾರಿ ಇಲಾಖೆ ಸಂಪೂರ್ಣ ಜಾಗೃತವಾಗಿದ್ದು ಪೂರ್ಣ ಮಟ್ಟದ ಸ್ವಾತಂತ್ರ್ಯ ಇರುವ ಸಮಯದಲ್ಲೂ ಗೋ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ ಎಂದಾದರೆ ಇದು ಪೊಲೀಸ್ ಮತ್ತು ಜಿಲ್ಲಾಡಳಿತ ವೈಫಲ್ಯ ಎಂದು ಹೇಳಿದರಲ್ಲದೆ. ಅದೇ ಸಣ್ಣ ಪುಟ್ಟ ಗುಂಪು ಸೇರಿದರೆ ಅಲ್ಲಿಗೆ ಪೊಲೀಸರು ತಕ್ಷಣ ಬಂದು ಬಂಧಿಸಿ ಬಂಧಿತರು ಜೈಲಿನಿಂದ ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತಾರೆ. ಅದೆ ರೀತಿ ಬೆಳಗ್ಗಿನ ಜಾವ ಐದು ಮುಕ್ಕಾಲು ಗಂಟೆಗೆ ಗೋ ಶಾಲೆಯಿಂದ ಗೋವುಗಳನ್ನು ದರೋಡೆ ಮಾಡಿದರೂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಇನ್ನೂ ವಿಫಲರಾಗಿದ್ದಾರೆ. ಮುಂದೆ 2 ದಿನಗಳೊಳಗೆ ಆರೋಪಿಗಳ ಬಂಧನ ಆಗದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಲಿದೆ. ಅಲ್ಲೂ ಸ್ಪಂಧನೆ ಸಿಗದಿದ್ದಲ್ಲಿ ಹಂತ ಹಂತವಾಗಿ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಅಮರಣಾಂತ ಉಪವಾಸಕ್ಕೆ ಬೆಂಬಲ:
ದರೋಡೆ ನಡೆದು 3 ದಿನಗಳ ನಂತರ ಹಂತಕರ ಪತ್ತೆಗೆ ಆಗ್ರಹಿಸಿ ಗೋ ಶಾಲೆಯ ಮಾಲಕ ರಾಜಾರಾಮ ಭಟ್‍ರವರು ನ್ಯಾಯಕ್ಕಾಗಿ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ. ಅವರಿಗೆ ಬೆಂಬಲವಾಗಿ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಗೋ ರಕ್ಷಕರು ಆಗಮಿಸುತ್ತಿದ್ದಾರೆ. ಇದಕ್ಕೆ ಹಿಂಜಾವೆಯೂ ಬೆಂಬಲ ನೀಡಿದೆ. ಆದರೆ ಮುಂದಿನ ಎರಡು ದಿನಗಳಲ್ಲಿ ಆರೋಪಿಗಳ ಪತ್ತೆಯಾಗದಿದ್ದಲ್ಲಿ ಜಿಲ್ಲೆಯಾದ್ಯಾಂತ ಹೋರಾಟ ಮುಂದುವರಿಯಲಿದೆ ಎಂದು ರಾಧಾಕೃಷ್ಣ ಅಡ್ಯಂತಾಯ ಎಚ್ಚರಿಸಿದರು.
ಪ್ರಣಾಳಿಕೆಯಲ್ಲಿ ಗೋ ನಿಷೇಧ ತರುವವರಿಗೆ ಮತ:
ಕರ್ನಾಟಕದಲ್ಲಿ ಸಿದ್ಧರಾಮಯ್ಯರವರು ಅಧಿಕಾರಕ್ಕೆ ಬಂದ ಆರಂಭದಲ್ಲೇ ಅವರು ಈ ಹಿಂದಿನ ಸರಕಾರ ಜಾರಿ ತರಲು ಪ್ರಯತ್ನಿಸಿರುವ ಗೋ ಹತ್ಯಾ ನಿಷೇಧ ಖಾಯ್ದೆಯನ್ನು ತೆಗೆದು ಹಾಕಿದರು. ಗೋ ಹತ್ಯೆಯನ್ನು ನಿಷೇಧ ಮಾಡುವುದಿಲ್ಲ ಎಂದು ಗೊತ್ತಾದ ಗೋ ಹಂತಕರು ನಮಗೆ ಗೋ ಹತ್ಯೆಗೆ ಬೆಂಬಲ ಸಿಕ್ಕಿದೆ ಎಂದು ರಾಜರೋಶವಾಗಿ ಗೋ ಹತ್ಯೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಾನು ಗೋ ಮಾಂಸ ತಿನ್ನುತ್ತೇನೆ ಎಂದು ಹೇಳಿದರು. ಆದರೆ ಅವರು ಬಹುಸಂಖ್ಯಾತರು ಪೂಜಿಸುವ ಗೋವಿನ ಮಾಂಸ ತಿನ್ನುತ್ತೇನೆ ಎಂದು ಹೇಳುವುದು ತಪ್ಪು. ಅವರು ಒಂದು ವರ್ಗದ ಮುಖ್ಯಮಂತ್ರಿಯಲ್ಲ ಎಂದು ತಿಳಿದು ಕೊಳ್ಳಬೇಕಾಗಿತ್ತು. ಈ ನಿಟ್ಟಿನಲ್ಲಿ ಮುಂದಿನ ದಿನ ದೇವರಿಗೆ ಸಮಾನವಾದ ಗೋವನ್ನು ಹತ್ಯೆ ಮಾಡುವುದನ್ನು ನಿಷೇಧಿಸಲು ಗೋಹಂತಕರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಗೋ ಹತ್ಯಾ ನಿಷೇಧ ಖಾಯ್ದೆ ಜಾರಿ ತರುವ ಕುರಿತು ಇಡಬೇಕು. ಅದರೊಂದಿಗೆ ಗೋವನ್ನು ಮಾಂಸವನ್ನು ಆಹಾರವನ್ನಾಗಿ ಇಟ್ಟು ಕೊಂಡವರಿಗೆ ಪರ್ಯಾಯ ವ್ಯವಸ್ಥೆಯಾಗಿ ಹಂದಿ ಸಾಕಲು ಅವಕಾಶ ಮಾಡಿಕೊಡಬೇಕೆಂದು ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂಜಾವೆಯ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿ.ಸಿ.ರೋಡ್, ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಹೋರಾಟ್ ಪ್ರಮುಖ್ ಅವಿನಾಶ್ ಪುರುಷರಕಟ್ಟೆ, ತಾಲೂಕು ಅಧ್ಯಕ್ಷ ಚಿನ್ಮಯ ರೈ ಉಪಸ್ಥಿತರಿದ್ದರು.