Recent Posts

Monday, January 27, 2025
ಬಂಟ್ವಾಳ

ಬಂಟ್ವಾಳ: 20ರಂದು ಕನ್ನಡ ಭವನ, ರಂಗ ಮಂದಿರ ಲೋಕಾರ್ಪಣೆ; 21ರಂದು ತಾಲೂಕು ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನ-ಕಹಳೆ ನ್ಯೂಸ್

ಬಂಟ್ವಾಳ : ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆಯಲ್ಲಿ ರೂ 1 ಕೋಟಿ ವೆಚ್ಚದಲ್ಲಿ ನಿರ್ಮಾಣಿಸಲಾದ ನೂತನ ‘ಕನ್ನಡ ಭವನ’ ಮತ್ತು ಸಾರ್ವಜನಿಕ ರಂಗಮಂದಿರ ಇದೇ 21ರಂದು ಲೋಕಾರ್ಪಣೆಗೊಳ್ಳಲಿದ್ದು, 21ರಂದು ತಾಲ್ಲೂಕು ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಅವರು ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ ಸಾಹಿತಿ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನ ಯಶಸ್ವಿಗೊಳಿಸಲು ಈಗಾಗಲೇ ಹಿರಿಯ ನಾಗರಿಕ ಬಸ್ತಿ ವಾಮನ ಶೆಣೈ ಮತ್ತು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮತ್ತು ಅಧ್ಯಕ್ಷ ಐತಪ್ಪ ಆಳ್ವ ಬಿ.ಸಿ.ರೋಡು ನೇತೃತ್ವದಲ್ಲಿ ವಿವಿಧ ಉಪ ಸಮಿತಿ ರಚಿಸಲಾಗಿದೆ ಎಂದರು. ಇದೇ 20ರಂದು ಬೆಳಿಗ್ಗೆ 8ಗಂಟೆಗೆ ಬಿ.ಸಿ.ರೋಡಿನ ಕೈಕಂಬ ದಿಂದ ಕೈಕುಂಜೆ ತನಕ ನಡೆಯುವ ಕನ್ನಡ ಭುವನೇಶ್ವರಿಯ ಆಕರ್ಷಕ ಮೆರವಣಿಗೆಗೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಚಾಲನೆ ನೀಡುವರು. ಮೊಡಂಕಾಪು ಚರ್ಚ್‍ನ ಧರ್ಮಗುರು ವಲೇರಿಯನ್ ಡಿಸೋಜ ಪುಷ್ಪಾರ್ಚನೆ ಸಲ್ಲಿಸುವರು. 9ಗಂಟೆಗೆ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಕನ್ನಡ ಭವನದಲ್ಲಿ ಆಶೀರ್ವಚನ ನೀಡಲಿದ್ದು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರ ರಾಷ್ರ್ಟ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಪರಿಷತ್ ಧ್ವಜಾರೋಹಣ, ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಕನ್ನಡ ಧ್ವಜಾರೋಹಣ ನೆರವೇರಿಸುವರು ಎಂದರು. ಅಂದು ಬೆಳಿಗ್ಗೆ 9.40 ಗಂಟೆಗೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಕನ್ನಡ ಭವನ ಮತ್ತು ಸಾರ್ವಜನಿಕ ರಂಗಮಂದಿರ ಲೋಕಾರ್ಪಣೆಗೊಳಿಸಲಿದ್ದು, ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಡ ಶ್ರೀನಿವಾಸ ಪೂಜಾರಿ ದೀಪ ಪ್ರಜ್ವಲನಗೊಳಿಸಲಿದ್ದು, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗರ ಸಭಾಭವನ ಉದ್ಘಾಟಿಸುವರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ರಾಜ್ಯಮಟ್ಟದ ಪುಸ್ತಕ ಸಂತೆ ಉದ್ಘಾಟಿಸಿ, ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಪಂಜೆ ಮತ್ತಿತರ ಕವಿಗಳ ಭಾವಚಿತ್ರ ಅನಾವರಣಗೊಳಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ದಾನಿಗಳ ನಾಮಫಲಕ ಮತ್ತು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಅನಾವರಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ನಾಮಫಲಕ ಅನಾವರಣಗೊಳಿಸುವರು. ಮೂಡುಬಿದ್ರೆ ಡಾ.ಎಂ.ಮೋಹನ ಆಳ್ವ ರಾಷ್ಟ್ರಪ್ರಶಸ್ತಿ ವಿಜೇತ ಯಕ್ಷಕಲಾವಿದ ಗೋವಿಂದ ಭಟ್ಟರ ಭಾವಚಿತ್ರ ಅನಾವರಣ, ಉದ್ಯಮಿ ಎರಕಳ ರಘುನಾಥ ಸೋಮಯಾಜಿ ಗೋವಿಂದ ಭಟ್ಟರಿಗೆ ಗೌರವಾರ್ಪಣೆ ಸಲ್ಲಿಸುವರು. ದಶಾವತಾರಿ ಗೋವಿಂದ ಭಟ್ ತಾಲ್ಲೂಕು ಕಸಾಪ ಪದಾದಿಕಾರಿಗಳ ನಾಮಫಲಕ ಅನಾವರಣಗೊಳಿಸುವರು. ಶೃಂಗೇರಿ ಮಠದ ಸತ್ಯಶಂಕರ ಬೊಳ್ಳಾಮಿವರು ಕಲ್ಲಡ್ಕ ಮಹಮ್ಮದ್ ಯಾಸೀರ್ ಇವರ ಮ್ಯೂಸಿಯಂ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಸಭಾಧ್ಯಕ್ಷತೆಯಲ್ಲಿ ಏರ್ಯ ಆನಂದಿ ಎಲ್.ಆಳ್ವ, ನೀರ್ಪಜೆ ಶಂಕರಿಯಮ್ಮ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ವಿವರಿಸಿದರು. ಅಂದು ಮಧ್ಯಾಹ್ನ 2ಗಂಟೆಗೆ ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಗಿರೀಶ ಭಟ್ ಅಜೆಕ್ಕಳ ಅಧ್ಯಕ್ಷತೆಯಲ್ಲಿ ನಡೆಯುವ ರಾಷ್ಟ್ರೀಯ ವಿಚಾರಗೋಷ್ಠಿಗೆ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಚಾಲನೆ ನೀಡುವರು. ಸಂಪನ್ಮೂಲ ವ್ಯಕ್ತಿಯಾಗಿ ಹಂಪಿ ಕನ್ನಡ ವಿವಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಅಂಕಣಕಾರ ಜೋಗಿ, ವಿಶ್ರಾಂತ ಪ್ರಾಂಶುಪಾಲ ಡಾ.ಕಮಲಾಕ್ಷ ಕೆ. ಮಾಹಿತಿ ನೀಡುವರು. ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಎಂ.ಇಬ್ರಾಹಿಂ ಶುಂಠಿಕೊಪ್ಪ, ಕೆ.ಪದ್ಮನಾಭ ಕೊಟ್ಟಾರಿ ಭಾಗವಹಿಸುವರು. ಸಂಜೆ 5ಗಂಟೆಗೆ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಅಧ್ಯಕ್ಷತೆಯಲ್ಲಿ 11ಮಂದಿ ತಾಲ್ಲೂಕು ಸಮ್ಮೇಳನಾಧ್ಯಕ್ಷರ ಸಮ್ಮಿಲನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ರಾತ್ರಿ ಗಂಟೆ 7.30ಕ್ಕೆ ಶಿವಮೊಗ್ಗ ರಂಗಾಯಣ ತಂಡವು ಹಿರಿಯ ಸಾಹಿತಿ ಡಾ.ನಾ.ಡಿಸೋಜರ ಕಾದಂಬರಿ ‘ಹಕ್ಕಿಗೊಂದು ಗೂಡು ಕೊಡಿ’ ಆಧಾರಿತ ‘ಹಕ್ಕಿ ಕಥೆ’ ನಾಟಕ ಪ್ರದರ್ಶಿಸುವರು ಎಂದರು. ಇದೇ 21ರಂದು ಬೆಳಿಗ್ಗೆ 9.30 ಗಂಟೆಗೆ ಹಿರಿಯ ಸಾಹಿತಿ ಡಾ.ಸುರೇಶ ನೆಗಳಗುಳಿ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ತಾಲ್ಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಉದ್ಘಾಟಿಸುವರು. ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. 11.30ಗಂಟೆಗೆ ಅಂತರ್ ರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಪ್ರಯುಕ್ತ ‘ಭಾಷಿಕ ಅನನ್ಯತೆ’ ಗೋಷ್ಠಿ ನಡೆಯಲಿದ್ದು, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡುವರು. ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಆಯೆಷಾ ಪೆರ್ಲ ಕಾಸರಗೋಡು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಗಧೀಶ ಪೈ ಕಾರ್ಕಳ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು. ಅಂದು ಮಧ್ಯಾಹ್ನ 1.30 ಗಂಟೆಗೆ ಪ್ರಾಧ್ಯಾಪಕ ಡಾ.ಯೋಗೀಶ ಕೈರೋಡಿ ಅಧ್ಯಕ್ಷತೆಯಲ್ಲಿ ಸಾಹಿತ್ಯ ಪ್ರಸ್ತುತಿ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕವಿಗಳಿಂದ ಕಥೆ. ಕವನ, ಚುಟುಕು, ಗಝಲ್, ಸ್ವಗತ, ಪ್ರಬಂಧ ಮಂಡನೆಯಾಗಲಿದೆ. 3ಗಂಟೆಗೆ ಬಂಟ್ವಾಳ ತಿರುಮಲ ದೇವಳದ ಯಕ್ಷಗಾನ ಪರಂಪರೆ ಬಗ್ಗೆ ಕ್ಷೇತ್ರದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ ಪಿ.ಅಧ್ಯಕ್ಷತೆಯಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಬಿ.ನಾಗೇಂದ್ರ ಪೈ ಉಪಸ್ಥಿತಿಯಲ್ಲಿ ವಿಚಾರ ಮಂಡನೆ ನಡೆಯಲಿದೆ. ಅಪರಾಹ್ನ 3.45 ಗಂಟೆಗೆ ಮಾಣಿಲ ಮೋಹನದಾಸ ಸ್ವಾಮೀಜಿ, ಅಳಿಕೆ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಅಧ್ಯಕ್ಷ ಕೆ.ಎಸ್.ಕೃಷ್ಣ ಭಟ್, ಶಾಸಕ ಯು.ಟಿ.ಖಾದರ್, ಕೊಕಣಿ ಸರದಾರ ಬಸ್ತಿ ವಾಮನ ಶೆಣೈ ಉಪಸ್ಥಿತಿಯಲ್ಲಿ 30ಕ್ಕೂ ಮಿಕ್ಕಿ ಮಂದಿ ಸಾಧಕರು ಮತ್ತು ಸಂಘಟನೆಗಳಿಗೆ ಸನ್ಮಾನಗೊಳ್ಳಲಿದೆ. ಸಂಜೆ 5ಗಂಟೆಗೆ ವಿಧಾನಪರಿಷತ್ ಸದಸ್ಯ ಕೆ.ಹರೀಶ ಕುಮಾರ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಉಪಸ್ಥಿತಿಯಲ್ಲಿ ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಸಮಾರೋಪ ಭಾಷಣ ಮಾಡುವರು. ಸಂಜೆ 6.30 ಗಂಟೆಗೆ ಡಾ.ಕೆ.ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಚೋಮನ ದುಡಿ’ ತುಳು ನಾಟಕ, ರಾತ್ರಿ ಗಂಟೆ 9ರಿಂದ ಪೆಡೂರು ಮೇಳದಿಂದ ‘ಶಪ್ತ ಭಾಮಿನಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಬಸ್ತಿ ವಾಮನ ಶೆಣೈ, ಕೊಳಕೆ ಗಂಗಾಧರ ಭಟ್, ಅಬ್ಬಾಸ್ ಆಲಿ, ರವೀಂದ್ರ ಕುಕ್ಕಾಜೆ, ಜಯಾನಂದ ಪೆರಾಜೆ ಮತ್ತಿತರರು ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು