ಅಂಬಿಕಾ ಪದವಿ ಕಾಲೇಜಿನಲ್ಲಿ ನ್ಯಾ.ಮೂ.ರಾಮ ಜೋಯಿಸ್ ಅವರಿಗೆ ಶ್ರದ್ಧಾಂಜಲಿ ರಾಮ ಜೋಯಿಸ್ ದೇಶ ಕಂಡ ಅತ್ಯುನ್ನತ ವ್ಯಕ್ತಿತ್ವ ; ಸುಬ್ರಹ್ಮಣ್ಯ ನಟ್ಟೋಜ-ಕಹಳೆ ನ್ಯೂಸ್
ಪುತ್ತೂರು : ನ್ಯಾಯಮೂರ್ತಿ ರಾಮ ಜೋಯಿಸ್ ಅವರು ದೇಶ ಕಂಡ ಅತ್ಯುನ್ನತ ವ್ಯಕ್ತಿತ್ವ. ಭಾರತೀಯ ಪರಂಪರೆ, ಸಂಸ್ಕøತಿ, ಆಚಾರ ವಿಚಾರಗಳ ಬಗೆಗೆ ಅವರಿಗೆ ಅಪಾರವಾದ ಗೌರವವಿತ್ತು. ಆ ನೆಲೆಯಿಂದಲೇ ನ್ಯಾಯತೀರ್ಮಾನ ಮಾಡುತ್ತಿದ್ದರು. ಅಂತಹವರು ಅಗಲಿರುವುದು ದೇಶಕ್ಕಾದ ಬಹುದೊಡ್ಡ ನಷ್ಟ ಎಂದು ಪುತ್ತೂರಿನ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನಲ್ಲಿ ನಿವೃತ್ತ ನ್ಯಾಯಮೂರ್ತಿ ರಾಮ ಜೋಯಿಸ್ ನಿಧನದ ಹಿನ್ನೆಲೆಯಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ರಾಮ ಜೋಯಿಸರು ಬಹುದೊಡ್ಡ ನ್ಯಾಯನಿರ್ವಹಣೆಯ ಹಾದಿಯನ್ನು ತೋರಿಸಾಗಿದ್ದಾರೆ. ಆ ಹಾದಿಯಲ್ಲಿ ಮುನ್ನಡೆಯಬೇಕಾದ್ದು ನಮ್ಮೆಲ್ಲರ ಜವಾಬ್ಧಾರಿ. ಇಂದಿನ ಮತ್ತು ಮುಂದಿನ ಪೀಳಿಗೆಗೆ ರಾಮ ಜೋಯಿಸರು ಒಂದು ಮಾದರಿಯಾಗಿ ಕಾಣಿಸುತ್ತಾರೆ ಎಂದರಲ್ಲದೆ ರಾಮಜೋಯಿಸರಂತಹ ಮತ್ತೊಬ್ಬ ವ್ಯಕ್ತಿಯನ್ನು ಹುಡುಕುವುದು ಕಷ್ಟಕರವಾದದ್ದು. ಯಾವುದೇ ಸಂದರ್ಭದಲ್ಲೂ ಅನ್ಯಾಯದ ವಿರುದ್ಧ ಸ್ಪಷ್ಟ ನಿಲುವನ್ನು ಹೊಂದಿದ ವ್ಯಕ್ತಿ ಅವರಾಗಿದ್ದರು ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ನ್ಯಾಮಮೂರ್ತಿ ರಾಮ ಜೋಯಿಸರು ಕರ್ನಾಟಕದವರೆನ್ನುವುದು ನಮ್ಮೆಲ್ಲರ ಹೆಮ್ಮೆ. ಅವೆಷ್ಟೋ ಗುರುತರ ಪ್ರಕರಣಗಳಲ್ಲಿ ಸ್ಪಷ್ಟ ನ್ಯಾಯವನ್ನು ಒದಗಿಸಿಕೊಟ್ಟ ಮಹಾನ್ ವ್ಯಕ್ತಿ ಅವರು. ತತ್ವಶಾಸ್ತ್ರದ ನೆಲೆಯಲ್ಲಿ ನ್ಯಾಯಶಾಸ್ತ್ರವನ್ನು ಪರಿಗಣಿಸಿದ ವಿಶೇಷ ನ್ಯಾಯಮೂರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅತೀ ವಿರಳ ನ್ಯಾಯಮೂರ್ತಿಗಳಲ್ಲಿ ಅವರೂ ಒಬ್ಬರು ಎಂದು ನುಡಿದರು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಷೇಕ್, ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಕ್ಷಯ್ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರೂ ನ್ಯಾಯಮೂರ್ತಿ ರಾಮ ಜೋಯಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ವಿದ್ಯಾರ್ಥಿನಿ ಪ್ರಕೃತಿ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು. ವಿದ್ಯಾಥಿನಿ ಸಾಯಿಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು.