ಪುತ್ತೂರು : ರಕ್ತದಾನ ಮಹಾದಾನ ಎಂಬಂತೆ ಯಾವುದೇ ಕಾರಣಕ್ಕು ರಕ್ತದಾನ ಮಾಡುವಾಗ ಹೆದರಬಾರದು. ರಕ್ತವನ್ನು ನೀಡುವಾಗ ಆರೋಗ್ಯದ ಕಡೆ ಗಮನಹರಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರಲ್ಲಿ ನಿರ್ದಿಷ್ಟವಾಗಿ ನಿಯಮಗಳನ್ನು ಪಾಲಿಸುವುದು ಒಳಿತು. ರೋಟರಿ ಸಂಸ್ಥೆ ಗಳು ಸಹಾಯದ ಅಗತ್ಯ ಇರುವವರಿಗೆ ಈ ರಕ್ತವನ್ನು ನೀಡುತ್ತದೆ ಎಂದು ರೋಟರಿ ಕ್ಲಬ್ ನ ಗವರ್ನರ್ ರೊ| ರಾಮಚಂದ್ರ ಭಟ್ ಹೇಳಿದರು.
ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪುತ್ತೂರು ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ, ಕಾಲೇಜಿನ ಪ್ರಾಂಶುಪಾಲ ಪ್ರೊ| ವಿಷ್ಣು ಗಣಪತಿ ಭಟ್ ಮಾತನಾಡಿ, ರಕ್ತದಾನದ ಮಹತ್ವ ತಿಳಿಯುವುದು ನಮ್ಮವರಿಗೆ ಸಮಸ್ಯೆ ಬಂದಾಗ ಮಾತ್ರ, ಆದ್ದರಿಂದ ಸೇವಾ ಮನೋಭಾವದ ಗುಣ ಎಲ್ಲರಲ್ಲಿರಬೇಕು. ರಕ್ತದಾನದ ಭಯವನ್ನು ಹೊಗಲಾಡಿಸಿ ಎಲ್ಲರಲ್ಲೂ ಸಹಾಯ ಮಾಡುವ ಮನೋಭಾವವನ್ನು ಈ ಶಿಬಿರದ ಮೂಲಕ ರೋಟರಿ ಸಂಸ್ಥೆ ಕಲ್ಪಿಸಿದೆ ಎಂದು ನುಡಿದರು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ನ ಅಧ್ಯಕ್ಷ ರೊ| ಕೃಷ್ಣ ಮೋಹನ್ ಸ್ವಾಗತಿಸಿ, ಪುತ್ತೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್‌ಮೆನ್ ಓಸ್ಕರ್ ವಂದಿಸಿದರು. ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.