Friday, November 22, 2024
ಸುದ್ದಿ

ಬಯಲು ಸೀಮೆಯಲ್ಲಿ ಬಂಟ್ವಾಳದ ಯುವತಿ ಭವ್ಯಾರಾಣಿ ಸಾಧನೆ ! – ಕಹಳೆ ನ್ಯೂಸ್

ಮಂಗಳೂರು: ತುಮಕೂರಿನ ಶೆಟ್ಟಿಗೊಂಡನ ಹಳ್ಳಿಯ ಗೆಳತಿಯ ಮನೆಗೆ ತೆರಳಿದ ದಕ್ಷಿಣ ಕನ್ನಡ ಮೂಲದ ಯುವತಿಯೊಬ್ಬರಿಗೆ ಅಲ್ಲಿ ಶೌಚಾಲಯ ಇಲ್ಲದಿದ್ದುದರಿಂದ ಒಂದು ದಿನದ ಮಟ್ಟಿಗೆ ಮುಜುಗರ ಉಂಟಾಯಿತು. ಆದರೆ ಅದೇ ಮುಜುಗರವನ್ನು ಹಳ್ಳಿಯ ಜನರು ದಿನವೂ ಅನುಭವಿಸುತ್ತಾರಲ್ಲ ಎಂಬ ಸಹಾನುಭೂತಿಯ ಚಿಂತನೆ ಮೊಳಕೆಯೊಡೆಯಲು ಅಂದಿನ ಅನುಭವ ಕಾರಣವಾಯಿತು. ಮಾತ್ರವಲ್ಲ, ಅದೇ ಚಿಂತನೆ ಮೊದಲಿಗೆ ಆ ಹಳ್ಳಿಯಲ್ಲಿ, ಬಳಿಕ ರಾಜ್ಯವ್ಯಾಪಿಯಾಗಿ ನೂರಾರು ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡುವುದಕ್ಕೆ  ಕಾರಣ ವಾಗಿ ಸ್ವತ್ಛಕ್ರಾಂತಿಗೆ ಪ್ರೇರಣೆ ನೀಡಿತು.

ಕಳೆದ ಏಳು ವರ್ಷಗಳ ಅವಧಿಯಲ್ಲಿ ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಈ ಯುವತಿ ಕಟ್ಟಿಸಿಕೊಟ್ಟಿರುವ ಶೌಚಾಲಯಗಳ ಸಂಖ್ಯೆ ಬರೋಬರಿ 662 ! ಹಳ್ಳಿ ಜನರಲ್ಲಿ ಸುರಕ್ಷಿತ, ಆರೋಗ್ಯಕರ ಶೌಚದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಯುವತಿ ದಕ್ಷಿಣ ಕನ್ನಡ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಚಾರ. ತುಮಕೂರು, ಬಳ್ಳಾರಿ ಯಂಥ ಜಿಲ್ಲೆಗಳ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಬಯಲು ಶೌಚ ಮುಕ್ತ ರಾಜ್ಯ ಹಾಗೂ ಸ್ವಚ್ಛ ಭಾರತ ನಿರ್ಮಾಣದ ಪಣ ತೊಟ್ಟ ಈ ಯುವತಿ ಬಂಟ್ವಾಳದ ಅನಂತಾಡಿಯ ಭವ್ಯಾರಾಣಿ ಪಿ.ಸಿ.

ಜಾಹೀರಾತು
ಜಾಹೀರಾತು
ಜಾಹೀರಾತು

ತುಮಕೂರಿನಲ್ಲಿ ಸಿಕ್ಕಿತು ಪ್ರೇರಣೆ: ಭವ್ಯಾ ರಾಣಿ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. 2010ರಲ್ಲಿ ತುಮಕೂರಿನ ತುರುವೇಕೆರೆ ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿರುವ ಗೆಳತಿಯ ಮನೆಯಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು.
ಆದರೆ ಅದು ಹಳ್ಳಿ, ಗೆಳತಿಯ ಮನೆಯಲ್ಲಿ ಶೌಚಾಲಯ ಇರಲಿಲ್ಲ. ವಿಚಾರಿಸಿದಾಗ ಇಡೀ ಹಳ್ಳಿಗೆ ಬಯಲು ಬಹಿರ್ದೆಸೆಯೇ ಶಾಶ್ವತವಾಗಿರುವುದು ಎಂದು ತಿಳಿಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಳ್ಳಿಯ ಯಾವುದೇ ಮನೆಯಲ್ಲಿ ಶೌಚಾಲಯ ಇಲ್ಲದಿರುವ ಬಗ್ಗೆ ಗೆಳತಿ ಹೇಳಿದ್ದನ್ನು ಕೇಳಿ ಮರುಗಿದ ಭವ್ಯಾರಾಣಿ, ಬೆಂಗಳೂರಿಗೆ ವಾಪಸಾದ ಅನಂತರ ಈ ನಿಟ್ಟಿನಲ್ಲಿ ಚಿಂತನೆಯನ್ನು ಮುಂದುವರಿಸಿದರು. ಸಮಸ್ಯೆಯ ಪರಿಹಾರಕ್ಕೆ ತಾನೇನು ಮಾಡಬಹುದು ಎಂದು ಯೋಚಿಸಿದರು. ಕೈತುಂಬಾ ವೇತನ ನೀಡುತ್ತಿದ್ದ ಉದ್ಯೋಗವನ್ನು ತ್ಯಜಿಸಿ, ಆ ವರೆಗೆ ತಾನು ದುಡಿದು ಸಂಪಾದಿಸಿದ ಹಣವನ್ನೆಲ್ಲ ಒಟ್ಟುಗೂಡಿಸಿಕೊಂಡು ಶೆಟ್ಟಿಗೊಂಡನಹಳ್ಳಿಗೆ ಮರಳಿದರು.  ಅನಂತರ ನಡೆದದ್ದು  ಸ್ವತ್ಛ ಕ್ರಾಂತಿಯ ಹೊಸ ಅಧ್ಯಾಯ.
ಶೈನ್‌ ಇಂಡಿಯಾ ಎನ್‌ಜಿಒ ಸ್ಥಾಪನೆ 2015ರ ವರೆಗೆ ಭವ್ಯಾ ಅವರು ತಮ್ಮದೇ ಹಣದಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಿದ್ದರು. ಆ ಬಳಿಕ ಶೌಚಾಲಯ ನಿರ್ಮಾಣದ ಮೂಲಕ ಸ್ವತ್ಛತೆಯ ಕ್ರಾಂತಿಯನ್ನು ಮಾಡುವ ಸಲುವಾಗಿ ತಮ್ಮದೇ ಆದ ಶೈನ್‌ ಇಂಡಿಯಾ ಎಂಬ ಎನ್‌ಜಿಒ ಅನ್ನು ತುಮಕೂರಿನಲ್ಲಿ ಸ್ಥಾಪಿಸಿದರು. ಪ್ರಸ್ತುತ ಶೌಚಾಲಯ ನಿರ್ಮಾಣಕ್ಕೆ ಸರಕಾರವು ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ. ಮತ್ತು ಪ. ಜಾತಿ ಮತ್ತು ಪ. ಪಂಗಡಕ್ಕೆ 15 ಸಾವಿರ ರೂ.ಗಳಂತೆ ಅನುದಾನ ನೀಡುತ್ತಿದೆ. ಇದು ಶೌಚಾಲಯ ನಿರ್ಮಾಣ ಸಂಪೂರ್ಣವಾದ ಬಳಿಕವೇ ಸಿಗುವುದರಿಂದ ಬಡ ಜನರು ಅಷ್ಟೊಂದು ಬಂಡವಾಳ ಹೂಡಿ ಶೌಚಾಲಯ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಸರಕಾರದ ಕಾರ್ಯಕ್ರಮ ಇದ್ದರೂ ಹಳ್ಳಿಗರಿಗೆ ಶೌಚಾಲಯ ನಿರ್ಮಿಸಲು ಇದೇ ತೊಡಕಾಗಿದೆ. ಹೀಗಾಗಿ ಶೈನ್‌ ಇಂಡಿಯಾ ಸಮಾಜ ಸೇವಾಸಕ್ತರ ನೆರವು ಪಡೆದು ಶೌಚಾಲಯ ಕಟ್ಟಿಸಿಕೊಡುತ್ತದೆ. ಪ್ರತೀ ಶೌಚಾಲಯಕ್ಕೆ ಸಮಾಜ ಸೇವಾಸಕ್ತರು ಬಂಡವಾಳ ಹೂಡುವಂತೆ ಮಾಡಿ, ಶೌಚಾಲಯ ನಿರ್ಮಾಣದ ಬಳಿಕ ಫಲಾನುಭವಿಗಳಿಗೆ ಸರಕಾರದಿಂದ ಬಂದ ಅನುದಾನವನ್ನು ಹಣ ಹೂಡಿದವರಿಗೆ ಮರಳಿಸುವ ಕಾರ್ಯವನ್ನು ಶೈನ್‌ ಇಂಡಿಯಾ ಮಾಡುತ್ತದೆ.

ನಿವೃತ್ತ ಶಿಕ್ಷಕರ ಪುತ್ರಿ
ಮೂಲತಃ ಬಂಟ್ವಾಳದ ಅನಂತಾಡಿಯವರಾದ ಭವ್ಯಾ ನಿವೃತ್ತ ಶಿಕ್ಷಕ ಚಂದಪ್ಪ ಮಾಸ್ತರ್‌ ಹಾಗೂ ಗೃಹಿಣಿ ಶಂಕರಿ ಅವರ ಪುತ್ರಿ. ಓರ್ವ ಸಹೋದರ ಮತ್ತು ಓರ್ವ ಸಹೋದರಿ ಇದ್ದಾರೆ. “ನನ್ನ ಜೀವಿತಾವಧಿಯಲ್ಲಿ ಇಡೀ ಕರ್ನಾಟಕ ರಾಜ್ಯವನ್ನು ಬಯಲು ಶೌಚಮುಕ್ತ ರಾಜ್ಯವನ್ನಾಗಿಸುವ ಕನಸನ್ನು ಹೊಂದಿದ್ದೇನೆ’ ಎನ್ನುತ್ತಾರೆ ಭವ್ಯಾರಾಣಿ. “ದ. ಕನ್ನಡದ ಜನರು ಸ್ವಾಭಿಮಾನಿಗಳು ಮತ್ತು ಬುದ್ಧಿವಂತರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಸಮಸ್ಯೆಗಳು ತುಂಬಾ ಕಡಿಮೆ. ಮುಂದಿನ ದಿನಗಳಲ್ಲಿ ಹುಟ್ಟೂರಿಗೂ ಸೇವೆ ಸಲ್ಲಿಸುತ್ತೇನೆ’ ಎನ್ನುತ್ತಾರವರು.

ಹಳ್ಳಿಯಲ್ಲಿ  ಚಿಗುರಿದ ಕನಸು ರಾಜ್ಯದೆಡೆಗೆ
ಹಳ್ಳಿಯ ಮನೆಗಳನ್ನು ಬಯಲುಶೌಚ ಮುಕ್ತಗೊಳಿಸುವ ಪಣ ತೊಟ್ಟಿರುವ ಭವ್ಯಾರಾಣಿ ಪ್ರಾರಂಭದಲ್ಲಿ ತನ್ನಲ್ಲಿದ್ದ ಮೂರು ಲಕ್ಷ ರೂ.ಗಳನ್ನು ಹೂಡಿಕೆ ಮಾಡಿ 2010-15ರ ವೇಳೆಗೆ ಶೆಟ್ಟಿಗೊಂಡನಹಳ್ಳಿಯಲ್ಲಿ 432 ಶೌಚಾಲಯಗಳನ್ನು ನಿರ್ಮಾಣ ಮಾಡಿದರು. ಒಂದು ಹಳ್ಳಿಯನ್ನು ಬಯಲು ಶೌಚ ಮುಕ್ತ ಹಳ್ಳಿಯನ್ನಾಗಿ ಮಾಡಬೇಕೆಂಬ ಕನಸಿನೊಂದಿಗೆ ಆರಂಭವಾದ ಈ ಕಾರ್ಯ ಈಗ ಇಡೀ ರಾಜ್ಯವನ್ನು ಬಯಲು ಶೌಚ ಮುಕ್ತ ಮಾಡಬೇಕು ಎಂಬ ಛಲದತ್ತ ಕೊಂಡೊಯ್ದಿದೆ. ಈಗಾಗಲೇ ಶೈನ್‌ ಇಂಡಿಯಾ ಮೂಲಕ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾವಿಹಾಳು ಹಾಗೂ ಬಿ.ಎಂ. ಸುಗೂರಿನ 179 ಮನೆಗಳಿಗೆ ಶೌಚಾಲಯ ಹಾಗೂ ತುಮಕೂರಿನ ಶಿರಾ ತಾಲೂಕಿನ ದಿಬ್ಬದ ಹಟ್ಟಿಯ 51 ಮನೆಗಳಿಗೆ ಬಚ್ಚಲುಮನೆ ಮತ್ತು ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದಾರೆ. ಸಾಮಾಜಿಕ ನೆರವು ಪಡೆದುಕೊಂಡು ಹಳ್ಳಿಗಳನ್ನು ಬಹಿರ್ದೆಸೆ ಮುಕ್ತ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಿಗೆ ತೆರಳಿ ಸ್ವತ್ಛ ಭಾರತದ ಕುರಿತು ಜನರಿಗೆ ಮಾಹಿತಿ ನೀಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ಕನಸು ಚಿಗುರೊಡೆಯಿತು
ಶೆಟ್ಟಿಗೊಂಡನಹಳ್ಳಿಯ ಗೆಳತಿಯ ಮನೆಯಲ್ಲಿ ನಡೆದ ಮದುವೆಗೆ ಹೋಗಿದ್ದೆ. ಅಲ್ಲಿ ಶೌಚಾಲಯವೇ ಇರಲಿಲ್ಲ. ಈ ಬಗ್ಗೆ ಕೇಳಿದಾಗ ಅಲ್ಲಿನ ಯಾವುದೇ ಮನೆಗಳಲ್ಲಿ ಶೌಚಾಲಯ ಇಲ್ಲ ಎಂಬುದು ತಿಳಿಯಿತು. ಅಲ್ಲಿನವರಿಗೆ ಇದು ಸಾಮಾನ್ಯ ಸಂಗತಿಯಾಗಿದ್ದರೂ ದಕ್ಷಿಣ ಕನ್ನಡದವರಾದ್ದರಿಂದ ನನಗೆ ಶೌಚಾಲಯ ಇಲ್ಲದುದು ದೊಡ್ಡ ಕೊರತೆಯಾಗಿ ಗಮನಕ್ಕೆ ಬಂತು. ಅಲ್ಲಿಂದ ನನ್ನ ಬದುಕಿಗೊಂದು ತಿರುವು ಸಿಕ್ಕಿತು. ಇಡೀ ಕರ್ನಾಟಕವನ್ನು ಬಯಲು ಶೌಚ ಮುಕ್ತ ರಾಜ್ಯವನ್ನಾಗಿಸುವ ನನ್ನ ಕನಸು ಚಿಗುರೊಡೆದದ್ದೂ ಪ್ರಾಯಃ ಅಲ್ಲಿಯೇ.
ಭವ್ಯಾರಾಣಿ, ಸ್ವಚ್ಛಕ್ರಾಂತಿಯ ಸಾಧಕಿ