ಗದಗ : ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನು ತಂದೆಯೊಬ್ಬ 2015ರ ಎಪ್ರಿಲ್ 6 ರಂದು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಕ್ರೂರಿ ತಂದೆಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿಯಾದ ಪ್ರಶಾಂತ್ ಗೌಡ ಪಾಟೀಲ್, ಪ್ರೀತಿ ಹೆಸರಿನಲ್ಲಿ ಮಹಿಳೆಯನ್ನು ನಂಬಿಸಿ ಮದುವೆಯಾಗಿ ದಂಪತಿಗಳಿಗೆ ಒಂದು ಮಗು ಜನಿಸಿತ್ತು. ನಂತರ ಮದುವೆಯಾದ ಇಬ್ಬರ ನಡುವೆ ವೈಮನಸ್ಸು ಮೂಡಿ, ದೂರವಾಗಿದ್ದರು. ಇದೇ ಕಾರಣದಿಂದಾಗಿ ಪ್ರಶಾಂತ್ ಗೌಡನ ಪತ್ನಿ ಜೀವನಾಂಶಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ಸಿಟ್ಟಾದ ಪ್ರಶಾಂತ್ ಗೌಡ ತಮ್ಮ ಒಂದೂವರೆ ವರ್ಷದ ಪುಟ್ಟ ಮಗುವನ್ನೇ ಅಪಹರಿಸಿ, ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡಕ್ಕೆ ಕೊಂಡು ಹೋಗಿ ಕತ್ತು ಹಿಸುಕಿ ಸಾಯಿಸಿ, ಮೃತದೇಹವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜಶೇಖರ ವಿ ಪಾಟೀಲ್, ಮಗುವನ್ನು ಕೊಂದ ಪ್ರಕರಣದಲ್ಲಿ ಅಪರಾಧಿ ಪ್ರಶಾಂತ ಗೌಡ ಪಾಟೀಲ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ದಿನಗಳ ವಿಚಾರಣೆಯ ಬಳಿಕ ಫೆಬ್ರವರಿ 18 ರಂದು ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಪ್ರಕರಣದಲ್ಲಿ ಅಪರಾಧಿ ಪ್ರಶಾಂತಗೌಡಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.