ವಿಟ್ಲ:ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆಯ ಸಂದರ್ಭ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ 21ನೇ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಲವು ಭಾಷೆಗಳ ಅಡಕತ್ತರಿಯಲ್ಲಿ ಸಿಲುಕಿದ್ದರಿಂದ ತುಳು ಭಾಷೆ ಕಡೆಗಣಿಸಲ್ಪಟ್ಟಿದೆ. ತುಳು ಭಾಷಿಗರು ಪರಿಶುದ್ಧವಾಗಿ ತುಳುವಲ್ಲಿ ಸಂವಹನ ಮಾಡಬೇಕು. ತುಳು ಭಾಷಾ ಪ್ರೇಮ ಆತ್ಮಜ್ಯೋತಿಯಾಗಿ ಅರಳಬೇಕು, ಸಾಹಿತ್ಯ ಶ್ರೇಷ್ಠವಾದುದು, ವೇದ-ಉಪನಿಷತ್ತು, ಪುರಾಣ, ಸಾಹಿತ್ಯ ಅಧ್ಯಯನದಿಂದ ಜ್ಞಾನವೃದ್ಧಿಯಾಗುತ್ತದೆ,ತುಳುವರ ಸೇವಾ ಮನೋಭಾವ ಸಮಷ್ಟಿಯಲ್ಲಿ ಕಾಣಬೇಕು ತುಳು ಭಾಷೆಯ ಏಳ್ಗೆಗಾಗಿ ಸಂಘಟಿತ ಪ್ರಯತ್ನವಾಗಬೇಕು ಎಂದು ನುಡಿದರು.
ಬಳಿಕ ಆಶೀರ್ವಚನ ನೀಡಿದ ಸಾಧ್ವಿ ಶ್ರೀ ಮಾತಾನಂದಮಯೀ ತುಳುನಾಡಿನ ಸಂಸ್ಕೃತಿ ಶ್ರೇಷ್ಠವಾದದ್ದು,ತುಳು ಭಾಷೆಯು ಸಂಸ್ಕೃತಿ ಮತ್ತು ಭಾವನೆಯನ್ನು ಅರಳಿಸುತ್ತದೆ, ತಲ್ಲೀನತೆಯಲ್ಲಿ ಮಾಡುವ ಕೆಲಸಕ್ಕೆ ಯಶಸ್ಸು ನಿಶ್ಚಿತ ಎಂದರು.
ಇದೇ ಸಂದರ್ಭ ಸಮ್ಮೇಳನಾಧ್ಯಕ್ಷ ಮಲಾರು ಜಯರಾಮ ರೈ ದಂಪತಿಯನ್ನು ಸಮ್ಮಾನಿಸಲಾಯಿತು. ನ0ತರ ಮಲಾರು ಜಯರಾಮ ರೈ ಬರೆದ ಕಬೀರೆರ ಕಮ್ಮೆನ, ಪ್ರೊ|ವಿ.ಬಿ.ಅರ್ತಿಕಜೆ ಬರೆದ ತುಳು ಹನುಮಾನ್ ಚಾಲೀಸಾ ಹಾಗೂ ಡಾ| ವಸಂತಕುಮಾರ ಪೆರ್ಲ ಬರೆದ ಮದಿಪುದ ಪಾತೆರೊಲು ಪುಸ್ತಕ ಬಿಡುಗಡೆ ಮಾಡಲಾಯಿತು. ಪುತ್ತೂರು ಒಡಿಯೂರು ಶ್ರೀ ಷಷ್ಟ್ಯಬ್ದ ಸಂಭ್ರಮ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕಾರಾಮ ಪೂಜಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಮಾತನಾಡಿದರು.
ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಡಾ| ವಸಂತ ಕುಮಾರ್ ಪೆರ್ಲ ಸ್ವಾಗತಿಸಿ, ಯಶವಂತ ವಿ.ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು, ಒಡಿಯೂರು ಶ್ರೀ ಗುರುದೇವ ಐ.ಟಿ.ಐ. ಪ್ರಾಚಾರ್ಯ ಕರುಣಾಕರ ಎನ್. ಬಿ. ವಂದಿಸಿ, ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು.