ಮಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿದ ಚಾರ್ಜ್ ಶೀಟ್‌ನಲ್ಲಿ ತನ್ನ ಫೋಟೊ ಮತ್ತು ಹೆಸರು ಬಳಕೆ ಮಾಡಿದ್ದನ್ನು ಆಕ್ಷೇಪಿಸಿ ಮಂಗಳೂರು ಮನಪಾ ಕಾರ್ಪೊರೇಟರ್ ಕಾಂಗ್ರೆಸ್‌ನ ಪ್ರತಿಭಾ ಕುಳಾಯಿ ಅವರು ಕೇಂದ್ರ ಕಾನೂನು ಸಚಿವರ ವಿರುದ್ಧ ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರ ವಿರುದ್ಧ ಮಾನನಷ್ಟ ದಾವೆ ಹೂಡಲಾಗುವುದು ಎಂದು ಪ್ರತಿಭಾ ಕುಳಾ ಬುಧವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎ. 1ರಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಡುಗಡೆ ಮಾಡಿದ ಚಾರ್ಜ್ ಶೀಟ್ ಪುಸ್ತಕದಲ್ಲಿ ಬಿಬಿಎಂಪಿಯ ಜೆಡಿಎಸ್ ಕಾರ್ಪೊರೇಟರ್ ಬದಲು ಪ್ರತಿಭಾ ಕುಳಾç ಫೋಟೊ ಬಳಸಿ ಎಡವಟ್ಟು ಮಾಡಿಕೊಂಡಿದ್ದರು.
ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್ ಪುಸ್ತಕದಲ್ಲಿ ನನ್ನ ಹೆಸರು ಹಾಗೂ ಫೋಟೋವನ್ನು ಬಳಸಿ ನನ್ನ ಮಾನಹಾನಿ ಮಾಡಿ ಮಾನಸಿಕ ಹಿಂಸೆ ನೀಡಿದೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಅವರು ನ್ಯಾಯಾಲಯದಲ್ಲಿ ಈ ಬಗ್ಗೆ ಸೂಕ್ತ ಕಾನೂನು ಪರಿಹಾರವನ್ನು ಕಂಡುಕೊಳ್ಳಲು ಸಲಹೆ ಮಾಡಿದ್ದಾರೆ. ಆ ಪ್ರಕಾರ ನಾನು ವಕೀಲ ಅರುಣ್ ಬಂಗೇರ ಅವರ ಮೂಲಕ ಮಾನನಷ್ಟ ದಾವೆ ಹೂಡಲು ತೀರ್ಮಾನಿಸಿದ್ದೇನೆ ಎಂದು ವಿವರಿಸಿದರು.
ಬಿಜೆಪಿ ರಾಷ್ಟ್ರೀಯ ಪಕ್ಷ. ಅದು ಗೊಂದಲದಿಂದ ಈ ರೀತಿ ತಪ್ಪಾಗಿ ನನ್ನ ಫೋಟೋ ಹಾಗೂ ಹೆಸರನ್ನು ಬಳಕೆ ಮಾಡಿರುವುದಾದರೆ ನಿಜಕ್ಕೂ ಆ ಪಕ್ಷಕ್ಕೆ ದೇಶ ಮತ್ತು ರಾಜ್ಯವನ್ನು ಆಳುವ ಅರ್ಹತೆಯೇ ಇಲ್ಲ. ಮತದಾರರು ಆ ಪಕ್ಷಕ್ಕೆ ಮತವನ್ನು ನೀಡಬಾರದು. ಈ ಪ್ರಕರಣದ ಕುರಿತು ಈವರೆಗೂ ಬಿಜೆಪಿ ಪಕ್ಷದಿಂದ ಯಾರೂ ಕ್ಷಮೆ ಯಾಚಿಸಿಲ್ಲ. ಅದನ್ನು ನಿರೀಕ್ಷಿಸುವುದೂ ಇಲ್ಲ. ಅವರ ಎಡವಟ್ಟಿನಿಂದ ನನ್ನ ಮಾನ ಹಾನಿಯಾಗಿದೆ. ಮಾನಸಿಕವಾಗಿ ಕಿರುಕುಳ ಅನುಭವಿಸಿದ್ದೇನೆ. ಬಿಜೆಪಿ ಈ ರೀತಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿರುವುದು ಇದೇ ಮೊದಲಲ್ಲ. ಹಾಗಾಗಿ ನ್ಯಾಯಕ್ಕಾಗಿ ನಾನು ಕಾನೂನು ಹೋರಾಟ ನಡೆಸುತ್ತಿದ್ದೇನೆ ಎಂದು ಪ್ರತಿಭಾ ಕುಳಾಯಿ ವಿವರಿಸಿದರು.
ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದಿಂದ ತನಗೆ ನೋಟಿಸ್ ನೀಡಲಾಗಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಆ ನೋಟಿಸಿಗೆ ಉತ್ತರ ನೀಡಿದ್ದೇನೆ. ನನ್ನ ವೈಯಕ್ತಿಕ ವಿಚಾರವನ್ನು ಪರಿಹರಿಸುವ ಅಧಿಕಾರ ನನಗಿದೆ. ನನಗೆ ಸರಿ ಅನ್ನಿಸಿದ್ದರಿಂದ ನಾನು ಆ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದೇನೆಯೇ ಹೊರತು ಪಕ್ಷದ ಬಗ್ಗೆ ಪ್ರಸ್ತಾವಿಸಿಲ್ಲ. ಶಿಸ್ತುಬದ್ಧ ಪಕ್ಷವಾಗಿರುವ ಕಾಂಗ್ರೆಸ್‌ನ ನಾಯಕರು ಪಕ್ಷದ ಸಿದ್ಧಾಂತಕ್ಕೆ ಪೂರಕವಾಗಿ ನನಗೆ ವಿವರಣೆ ಕೋರಿ ನೋಟಿಸ್ ನೀಡಿದ್ದಾರೆಯೇ ಹೊರತು ಶಿಕ್ಷೆ ನೀಡಿದ್ದಲ್ಲ. ಪಕ್ಷದ ಆ ಕ್ರಮದ ಬಗ್ಗೆ ನಾನು ಬೇಸರಿಸಿಕೊಂಡಿಲ್ಲ. ಪಕ್ಷ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಪ್ರತಿಭಾ ಕುಳಾಯಿ ಸ್ಪಷ್ಟಪಡಿಸಿದರು.