ಮಂಗಳೂರು : ದ.ಕ ರೆಡ್ ಕ್ರಾಸ್ ಚೆಯರ್ ಮನ್ ಡಾ.ಶಾಂತಾರಾಮ ಶೆಟ್ಟಿ ಅವರು ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಸರಕಾರದ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಸೌಲಭ್ಯವನ್ನು ಸಮಾಜದ ಎಲ್ಲಾ ಜನರಿಗೆ ಒದಗಿಸಬೇಕು ಮತ್ತು ಈ ಮಾಹಿತಿ ಎಲ್ಲರಿಗೂ ತಲುಪಬೇಕಾಗಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 22 ರಿಂದ 24 ರವರೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ಗೆ ನೋಂದಣಿ ಶಿಬಿರವ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ , ಜಿಲ್ಲಾ .ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ವಾರ್ತಾ ಇಲಾಖೆಯ ದೀಪಾ ಶೆಟ್ಟಿ, ಕೋಶಾಧಿಕಾರಿ ಬಿ..ಎನ್.ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಮೊದಲಾದವರು ಉಪಸ್ಥಿತರಿದ್ದರು.