ಫೆ.27ರಿಂದ ಮಾ. 1ರವರೆಗೆ ಕೊರೊನಾ ಸಂದರ್ಭದಲ್ಲಿ ಆಯುರ್ವೇದ ಕಷಾಯ ಮೂಲಕ ಮನೆಮಾತಾದ ಪರ್ಲಡ್ಕದ ಎಸ್‌ಡಿಪಿ ರಿಸರ್ಚ್ ಸೆಂಟರ್ ಆವರಣದಲ್ಲಿ ” ಕಲೋಪಾಸನಾ – 2021 ” ಕಾರ್ಯಕ್ರಮ ; ಯಕ್ಷಗಾನ ವೈಭವ ಸಂಗೀತ ಸಂಭ್ರಮ – ಕಹಳೆ ನ್ಯೂಸ್
ಪುತ್ತೂರು : ಭಾರತೀಯ ವೈವಿಧ್ಯಮಯ ಕಲೆಗಳನ್ನು ಕಲಾಪ್ರಿಯರಿಗೆ ಉಣಬಡಿಸುವ ನಿಟ್ಟಿನಲ್ಲಿ ಕಳೆದ ೧೬ ವರ್ಷಗಳಿಂದ ಪ್ರಸಿದ್ಧ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನಗಳನ್ನು ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಇದರ ಆಶ್ರಯದಲ್ಲಿ ಫೆ.೨೭ ರಿಂದ ಮಾ.೧ ರ ತನಕ ೩ ದಿನಗಳ ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ಜರಗಲಿದೆ.
ಈ ಕುರಿತು ಕಹಳೆ ನ್ಯೂಸ್ ಗೆ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಅವರು ಪ್ರತೀ ವರ್ಷ ೨ ದಿನ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮ ಹಾಗೂ ಒಂದು ದಿನ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಈ ಬಾರಿ ೨ ದಿನ ಯಕ್ಷಗಾನ ಏರ್ಪಡಿಸಲಾಗಿದೆ ಎಂದು ಹೇಳಿದ ಅವರು ಫೆ. ೨೭ರಂದು ಸಂಜೆ ೬ ಗಂಟೆಗೆ ಶಾಸಕ ಸಂಜೀವ ಮಠಂದೂರು ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮೊದಲ ದಿನದ ಉತ್ಸವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಚೆನೈನ ವಿದ್ವಾನ್ ರಾಮಕೃಷ್ಣನ್ ಮೂರ್ತಿ ಅವರ ಹಾಡುಗಾರಿಕೆ ಇರಲಿದ್ದು, ವಯಲಿನ್‌ನಲ್ಲಿ ವಿದುಷಿ ಚಾರುಮತಿ ರಘುರಾಮನ್, ಮೃದಂಗದಲ್ಲಿ ವಿದ್ವಾನ್ ದಿಲ್ಲಿ ಎಸ್. ಸಾಯಿರಾಮ್, ಘಟಂನಲ್ಲಿ ವಿದ್ವಾನ್ ವಝಪಲ್ಲಿ ಆರ್. ಕೃಷ್ಣ ಕುಮಾರ್ ಸಾಥ್ ನೀಡಲಿದ್ದಾರೆ. ಫೆ. ೨೮ರಂದು ಸಂಜೆ ೬.೩೦ಕ್ಕೆ ಶ್ರೀ ಸಾಲಿಗ್ರಾಮ ಮೇಳದವರಿಂದ ಬಡಗುತಿಟ್ಟು ಶೈಲಿಯ ಯಕ್ಷಗಾನ ಚಿತ್ರಾಕ್ಷಿ ಕಲ್ಯಾಣ- ಮೀನಾಕ್ಷಿ ಕಲ್ಯಾಣ ಪ್ರದರ್ಶನಗೊಳ್ಳಲಿದೆ. ಮಾ. ೧ರಂದು ಸಂಜೆ ೬.೩೦ಕ್ಕೆ ಶ್ರೀ ಹನುಮಗಿರಿ ಮೇಳದವರಿಂದ ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ಶುಕ್ರನಂದನೆ ಪ್ರದರ್ಶನಗೊಳ್ಳಲಿದೆ.